ಯಾದಗಿರಿ: ಬರ ನಿರ್ವಹಣೆಗೆ ಸಾಕಷ್ಟು ಹಣ ಇದ್ದರೂ, ನೀರು ನೀಡಿದವರಿಗೆ ಯಾಕೆ ಪೇಮೆಂಟ್ ಮಾಡುತ್ತಿಲ್ಲ ಎಂದು ಸಚಿವ ಆರ್.ವಿ ದೇಶಪಾಂಡೆ ಯಾದಗಿರಿ ಜಿಲ್ಲೆಯ 4 ಜನ ತಹಶೀಲ್ದಾರರನ್ನು ಶಾಲಾ ಮಕ್ಕಳಂತೆ ಎದ್ದು ನಿಲ್ಲಿಸಿ, ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬುಧವಾರ ರಾತ್ರಿಯವರೆಗೂ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಂದಾಯ ಸಚಿವ ಆರ್.ವಿ ದೇಶಪಾಂಡೆ, ಬರಗಾಲದಲ್ಲಿ ನೀರು ಪೂರೈಕೆ ಮಾಡಿದ ಟ್ಯಾಂಕರ್ ಮಾಲೀಕರಿಗೆ ಹಣ ನೀಡದೆ ಸತಾಯಿಸುತ್ತಿದ್ದ ತಹಶೀಲ್ದಾರ್ ಗಳಿಗೆ ಚಳಿ ಬಿಡಿಸಿದರು.
Advertisement
Advertisement
ಬರಗಾಲದ ನಿರ್ವಹಣೆಗಾಗಿ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಹೀಗಿದ್ದರೂ ಟ್ಯಾಂಕರ್ ಮಾಲೀಕರಿಗೆ ಯಾಕೆ ಹಣ ಬಾಕಿ ಉಳಿಸಿಕೊಂಡಿದ್ದೀರಿ. ಹಣ ಇದ್ದರೂ ಬೇಜವಬ್ದಾರಿತನ ಯಾಕೆ ಎಂದು ಜಿಲ್ಲೆಯ ಶಹಪುರ, ಸುರಪುರ, ಹುಣಸಗಿ ಮತ್ತು ವಡಗೇರಾ ತಾಲೂಕಿನ ತಹಶೀಲ್ದಾರರನ್ನು ಎದ್ದು ನಿಲ್ಲಿಸಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
Advertisement
ಜಿಲ್ಲೆಯಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ವಿವಿಧ ಗ್ರಾಮಗಳಿಗೆ ಜಿಲ್ಲಾಡಳಿತದಿಂದ ಖಾಸಗಿ ಟ್ಯಾಂಕರ್ ನಿಂದ ನೀರು ಪೂರೈಕೆ ಮಾಡಲಾಗುತಿತ್ತು. ಆದರೆ ಬೇಸಿಗೆ ಆರಂಭದಿಂದ ಮೇ 8ರವರೆಗೆ ಮಾತ್ರ ತಹಶೀಲ್ದಾರರು ಟ್ಯಾಂಕರ್ ಗಳಿಗೆ ಹಣ ಪಾವತಿ ಮಾಡಿದ್ದರು. ಅಲ್ಲದೆ ಹಣ ಇದ್ದರೂ ಟ್ಯಾಂಕರ್ ಮಾಲೀಕರಿಗೆ ಹಣ ನೀಡದೆ ಕಳೆದ ಎರಡು ತಿಂಗಳಿನಿಂದ ಸತಾಯಿಸುತ್ತಿದ್ದರು.
ಈ ಬಗ್ಗೆ ಬುಧವಾರ ಜಿಲ್ಲೆಗೆ ಭೇಟಿ ಕೊಟ್ಟ ಸಚಿವರ ಎದುರು ಟ್ಯಾಂಕರ್ ಮಾಲೀಕರು ತಮ್ಮ ಅಳಲನ್ನು ತೊಡಿಕೊಂಡಿದರು. ಇದಕ್ಕೆ ಸಿಡಿಮಿಡಿಗೊಂಡ ಸಚಿವ ಆರ್.ವಿ ದೇಶಪಾಂಡೆ, ಶಾಲಾ ಮಕ್ಕಳಂತೆ ತಹಶೀಲ್ದಾರ್ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಮಯಕ್ಕೆ ಸರಿಯಾಗಿ ಪೇಮೆಂಟ್ ಮಾಡದ ತಹಶೀಲ್ದಾರರಿಗೆ ನೋಟಿಸ್ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ಸಹ ನೀಡಿದ್ದಾರೆ.