ಹಾಸನ: ರಾಜ್ಯದಲ್ಲಿ ವಿಪರೀತ ಮಳೆಯಿಂದ ಸುಮಾರು 5 ಲಕ್ಷ ಹೆಕ್ಟೇರ್ ಬೆಳೆಹಾನಿ ಸಂಭವಿಸಿದ್ದು ತ್ವರಿತಗತಿಯಲ್ಲಿ ಪರಿಹಾರ ವಿತರಣೆಗೆ ಅಗತ್ಯ ಕ್ರಮವಹಿಸಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಜಿಲ್ಲೆಯ ಅರಕಲಗೂಡು ತಾಲೂಕಿನ ರಾಗಿಮರೂರು ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯಲ್ಲಿ 47,022 ಹೆಕ್ಟೇರ್ ಬೆಳೆಹಾನಿ, 310 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸುಮಾರು 100 ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ನಾಶವಾಗಿದ್ದು ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Advertisement
Advertisement
ಬೆಳೆ ಹಾನಿ ಅಗತ್ಯ ಮಾಹಿತಿ ಪಡೆದು ಪರಿಹಾರ ವಿತರಣೆ ಕ್ರಮಕೈಗೊಳ್ಳುವಂತೆ ಕಂದಾಯ- ಕೃಷಿ- ತೋಟಗಾರಿಕೆ ಇಲಾಖೆ ಅಧಿಕಾರಿಗಳೇ ಈಗಾಗಲೇ ಸೂಚನೆ ನೀಡಿದ್ದು, ವಾರದಿಂದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಹಂತಹಂತವಾಗಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು . ಇದನ್ನೂ ಓದಿ: ನಮಗೆ ಇಡೀ ಜಿಲ್ಲೆ ಅಭಿವೃದ್ದಿ ಮುಖ್ಯ, ಅಂತಹ ಪಾಪದ ಕೆಲಸ ನಾವು ಮಾಡಿಲ್ಲ: ಮಾಧುಸ್ವಾಮಿ
Advertisement
ಬೆಳೆ ಹಾನಿ ಪರಿಹಾರಕ್ಕೆ ಈಗಾಗಲೇ 300 ಕೋಟಿ ರೂ ಪರಿಹಾರ ವಿತರಣೆ ಮಾಡಲಾಗಿದ್ದು, ನಿನ್ನೆ ಸಹ 68 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಇಂದು ಕೊಡಗು- ಹಾಸನ -ಮಂಡ್ಯ- ತುಮಕೂರು ಜಿಲ್ಲೆಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ಮಾಡಲಾಗುವುದು. ನಂತರ ರಾಜಧಾನಿಗೆ ತೆರಳಿ ಎನ್ ಡಿ.ಆರ್ ಎಫ್ ಬೆಳೆಹಾನಿ ಇದುವರೆಗೆ ಎಷ್ಟು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ಪಡೆಯಲಾಗುವುದು ಎಂದರು.
Advertisement
ಅಲ್ಲದೇ ಕೇಂದ್ರ ಸರ್ಕಾರಕ್ಕೆ ಎಮ್ ಡಿ ಆರ್ ಎಫ್ ನಿಯಮದಡಿ ನೀಡುತ್ತಿರುವ ಹೆಕ್ಟೇರ್ ಗೆ 6,800 ಪರಿಹಾರವನ್ನು ಹೆಚ್ಚಿಸಬೇಕು ಎಂದು ಈಗಾಗಲೇ ಪ್ರಧಾನಿ ಅವರಿಗೆ ಪತ್ರ ಮುಖೇನ ತಿಳಿಸಲಾಗಿದೆ. ಎನ್ ಡಿ ಆರ್ ಎಫ್ ಪರಿಹಾರ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಇರುವ ನಿಯಮದಂತೆ ನೀಡಲಾಗುತ್ತಿದೆ. ಇದರ ಮೂರು ಪಟ್ಟು ಪರಿಹಾರ ಏರಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜಯಲಲಿತಾ ನಿವಾಸ ಸ್ವಾಧೀನ- ತಮಿಳುನಾಡು ಸರ್ಕಾರದ ನಿಲುವಿಗೆ ಹೈಕೋರ್ಟ್ ತಡೆ
ನವೆಂಬರ್ 30ರವರೆಗೆ ಮಳೆ:
ಚೆನ್ನೈನಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ ನವಂಬರ್ 30ರವರೆಗೂ ಸಹ ಮಳೆ ಮುಂದುವರಿಯಲಿದೆ. ಆದ್ದರಿಂದ ಅಗತ್ಯ ಕ್ರಮವಹಿಸುವಂತೆ ಇಲಾಖೆಗೆ ಸೂಚನೆ ನೀಡಲಾಗಿದ್ದು, ರೈತರು ಸಹ ಮಳೆಯ ಹವಾಮಾನದ ವೈಪರೀತ್ಯವನ್ನು ಗಮನಿಸಿ ಬೆಳೆ ಕೊಯ್ಲು ಹಾಗೂ ಬೆಳೆ ಸಂರಕ್ಷಣೆಗೆ ಹೆಚ್ಚು ಗಮನಹರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಸಕಲೇಶಪುರ- ಆಲೂರು -ಕೊಡಗು ಭಾಗದಲ್ಲಿ ಆನೆ ಹಾವಳಿ ಸಂಬಂಧ ಈಗಾಗಲೇ ಮಾಹಿತಿ ಪಡೆಯಲಾಗಿದೆ. ಆನೆ ಹಾವಳಿ ಪರಿಹಾರ ಹಾಗೂ ಹಾವಳಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು. ಹಾಗೂ ಆನೆ ಹಾವಳಿಯಿಂದ ತುತ್ತಾದ ಬೆಳೆ ನಷ್ಟ ಹಾಗೂ ಪ್ರಾಣಹಾನಿಗೆ ಅಗತ್ಯ ಪರಿಹಾರ ವಿತರಣೆಗೆ ಸೂಚನೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬೆಳೆಹಾನಿ ಸಂಬಂಧ ಅಗತ್ಯ ಮಾಹಿತಿಯನ್ನು ನೀಡುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು..ಅಗತ್ಯ ಮಾಹಿತಿ ಪಡೆದ ನಂತರ ಹಂತಹಂತವಾಗಿ ಪರಿಹಾರ ವಿತರಣೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತೋಟಕಾರಿಗೆ ಮತ್ತು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ರವಿ, ಸುಶ್ಮ, ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.