ಬೆಂಗಳೂರು: ಇತ್ತೀಚೆಗೆ ವಿಧಾನಸೌಧದಲ್ಲಿ ಸಿಕ್ಕ 25 ಲಕ್ಷ ಹಣ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿಗೆ ನುಂಗಲಾರದ ತುತ್ತಾಗಿದೆ.
ಸಚಿವರು ಗುತ್ತಿಗೆದಾರರಿಂದ ಹಣ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಲಂಚ ನೀಡಿದ ಆ ಗುತ್ತಿಗೆದಾರರು ಯೋಗೀಶ್ ಬಾಬು, ಜ್ಯೋತಿ ಪ್ರಕಾಶ್, ಉಮೇಶ್, ರಾಜು ಮತ್ತು ಸತೀಶ್ ಎಂಬುದಾಗಿ ಇದೀಗ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಪ್ರಕರಣದ ತನಿಖೆಗೆ ಇಳಿದ ಎಸಿಬಿ ದಾಖಲೆ ಸಮೇತ ಗುತ್ತಿಗೆದಾರರನ್ನು ಪತ್ತೆ ಹಚ್ಚಿದೆ. ಈ ಐವರು ಗುತ್ತಿಗೆದಾರರ ಜೊತೆ ಸಚಿವ ಪುಟ್ಟರಂಗಶೆಟ್ಟಿ ಅವರು ನಿರಂತರವಾಗಿ ಫೋನ್ ಸಂಪರ್ಕದಲ್ಲಿರುತ್ತಿದ್ದರು. ಇವರೆಲ್ಲರು ರಸ್ತೆ ಗುತ್ತಿಗೆದಾರರಾಗಿದ್ದು, ಡಾಂಬರೀಕರಣದ ಗುತ್ತಿಗೆ ಪಡೆಯಲು ಸಚಿವರಿಗೆ ತಲಾ ಐದು ಲಕ್ಷ ಟೋಕನ್ ಅಡ್ವಾನ್ಸ್ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಧಾನಸೌಧದ ಪಶ್ಚಿಮ ಗೇಟ್‍ನಲ್ಲಿ ಸಿಕ್ತು ಕಂತೆ ಕಂತೆ ಹಣ – ಸಚಿವರ ಕಚೇರಿ ಟೈಪಿಸ್ಟ್ ಬಳಿಯೇ ಹಣ ಪತ್ತೆ!
ಬರೋಬ್ಬರಿ ಎರಡು ಕೋಟಿಗೆ ನಡೆದಿದ್ದ ಡೀಲ್‍ನಲ್ಲಿ ಸಚಿವರಿಗೆ 25 ಲಕ್ಷ ಟೋಕನ್ ಅಡ್ವಾನ್ಸ್ ಆಗಿತ್ತು. ಈ ಐವರು ಲಂಚ ನೀಡಿದವರ ಹೇಳಿಕೆ ಆಧರಿಸಿ ಇದೀಗ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಇದೇ ವಾರದಲ್ಲಿ ಎಸಿಬಿ ನೋಟೀಸ್ ನೀಡುವ ಸಾಧ್ಯತೆಗಳಿವೆ. ಈ ಎಲ್ಲಾ ಬೆಳವಣಿಗೆಗಳಿಂದ ಮಾಜಿ ಸಿಎಂ ಆಪ್ತ ಮಿನಿಸ್ಟರ್ ಪುಟ್ಟರಂಗಶೆಟ್ಟಿ ಅರೆಸ್ಟ್ ಆಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಯಾವುದೇ ತನಿಖೆಗೂ ಸಿದ್ಧ, ನನ್ನ ವಿರುದ್ಧ ಷಡ್ಯಂತ್ರ: ಪುಟ್ಟರಂಗಶೆಟ್ಟಿ
ಏನಿದು ಪ್ರಕರಣ..?:
ಇತ್ತೀಚೆಗೆ ವಿಧಾನ ಸೌಧದ ಪಶ್ಚಿಮ ಗೇಟ್ ಬಳಿ ಕಾರು ಪರಿಶೀಲನೆ ನಡೆಸುತ್ತಿದ್ದ ವೇಳೆ ಮೋಹನ್ ಎಂಬಾತನ ಬಳಿ ಸುಮಾರು 25.76 ಲಕ್ಷ ರೂ. ಹಣ ಪತ್ತೆಯಾಗಿತ್ತು. ಮೋಹನ್ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಟೈಪಿಸ್ಟ್ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿತ್ತು. ಹಣ ಪತ್ತೆಯಾದ ಕೂಡಲೇ ಮೋಹನ್ ನನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಣದ ಮೂಲದ ಕುರಿತು ವಿಚಾರಣೆ ಆರಂಭಿಸಿದ್ದರು. ಈ ಕುರಿತು ಅಂದು ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಸಚಿವರು, ವಿಧಾನದಸೌಧದ ತಮ್ಮ ಕಚೇರಿಯಲ್ಲಿ ಸಿಬ್ಬಂದಿ ಬಳಿ ಹಣ ಸಿಕ್ಕಿರುವ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಈ ಪ್ರಕರಣದ ಬಗ್ಗೆ ಯಾವುದೇ ತನಿಖೆಗೂ ಸಿದ್ಧನಿದ್ದೇನೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv