– ನಿಗಮದಲ್ಲಿ ಸಿಬ್ಬಂದಿ ಕೊರತೆ, ಅನುದಾನದ ಸಮಸ್ಯೆ ಆದ್ಯತೆ ಮೇರೆಗೆ ಪರಿಹಾರ
– ಕೇಂದ್ರದ ಅನುದಾನ ತರಲು ಅಧಿಕಾರಿಗಳು ಶ್ರಮಿಸಬೇಕು
ಬೆಂಗಳೂರು: ಉತ್ತರ ಕರ್ನಾಟಕದ ಜೀವನಾಡಿಯಾದ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ (N Chaluvaraya Swamy) ಅವರು ಅಧಿಕಾರಿಗಳ ಕಾರ್ಯವೈಖರಿಯನ್ನ ಸಂಪೂರ್ಣವಾಗಿ ಅವಲೋಕಿಸಿದರು.
ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ ಹಾಗೂ ಗದಗ ಸೇರಿದಂತೆ ಏಳು ಪ್ರಮುಖ ಜಿಲ್ಲೆಗಳ, ಐದು ವಲಯಗಳ 46 ತಾಲೂಕು ಹಾಗೂ 33 ವಿಧಾನಸಭಾ ಕ್ಷೇತ್ರಗಳ ಬೃಹತ್ ವ್ಯಾಪ್ತಿ ಹೊಂದಿರುವ ಈ ನಿಗಮದ ಸಮಗ್ರ ಮಾಹಿತಿಯನ್ನ ಕೆಬಿಜೆಎನ್‌ಎಲ್ ನಲ್ಲಿ ಇಂದು ನಡೆದ ಸಭೆಯಲ್ಲಿ ಸಚಿವರು ಪಡೆದುಕೊಂಡರು. ಸಿಬ್ಬಂದಿ ವಿವರ, ಕೆರೆ ತುಂಬಿಸುವ ಯೋಜನೆಗಳು ಹಾಗೂ ಇಲಾಖೆಯ ವಿವಿಧ ಕಾಮಗಾರಿಗಳ ಆಳವಾದ ಮಾಹಿತಿ ಪಡೆದ ಸಚಿವರು, ಇಲಾಖೆಯನ್ನ ಮತ್ತಷ್ಟು ಚುರುಕುಗೊಳಿಸುವ ಸ್ಪಷ್ಟ ಸಂದೇಶ ರವಾನಿಸಿದರು.

24 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಒದಗಿಸಲಾದ ಹನಿ ನೀರಾವರಿ ನಿರೀಕ್ಷಿತ ಯಶಸ್ಸು ಕಾಣದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಚಲುವರಾಯಸ್ವಾಮಿ, ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದರು. ಗುತ್ತಿಗೆ ಪಡೆದವರು ಸರಿಯಾಗಿ ನೀರು ಪೂರೈಸುತ್ತಿಲ್ಲ ಹಾಗೂ ಕಾಯ್ದೆಯ ಪ್ರಕಾರ ಐದು ವರ್ಷಗಳ ನಿರ್ವಹಣಾ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂಬುದನ್ನ ಗಂಭೀರವಾಗಿ ಪರಿಗಣಿಸಿದ ಅವರು, ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸುವ ತೀರ್ಮಾನ ಪ್ರಕಟಿಸಿದರು.
ಕೇವಲ ನ್ಯಾಯಾಲಯದ ನೆಪವೊಡ್ಡಿ ಕಾಮಗಾರಿ ವಿಳಂಬ ಮಾಡುವುದನ್ನ ಸಹಿಸುವುದಿಲ್ಲ, ಪ್ರತಿಯೊಂದು ಸಮಸ್ಯೆಗೂ ತ್ವರಿತ ಪರಿಹಾರ ಒದಗಿಸಲೇಬೇಕು ಎಂದು ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ-3) ಸಂಬಂಧ ಸಚಿವರು ಅತ್ಯಂತ ಕಟ್ಟುನಿಟ್ಟಿನ ನಿಲುವು ಪ್ರದರ್ಶಿಸಿದರು.

1,33,887 ಹೆಕ್ಟೇರ್ ಭೂಸ್ವಾಧೀನ ಬೃಹತ್ ಸವಾಲು
ಈ ಯೋಜನೆಗಾಗಿ ಕಾಲುವೆ ಹಾಗೂ ಹಳ್ಳಿಗಳು ಸೇರಿ ಒಟ್ಟು 1,33,887 ಹೆಕ್ಟೇರ್ ಭೂಸ್ವಾಧೀನದ ಬೃಹತ್ ಸವಾಲು ಎದುರಿಗಿದ್ದು, ಇದರಿಂದ 100 ಟಿಎಂಸಿ ನೀರು ಶೇಖರಿಸಬಹುದಾಗಿದೆ. 184 ಗ್ರಾಮಗಳ ಪೈಕಿ 87 ಗ್ರಾಮಗಳಿಗೆ ಶೀಘ್ರವೇ ನೋಟಿಫಿಕೇಷನ್ ಹೊರಡಿಸುವ ಪ್ರಕ್ರಿಯೆಯಲ್ಲಿ ಎದುರಾಗುವ ರಾಜಕೀಯ ಹಾಗೂ ಸ್ಥಳೀಯ ಶಾಸಕರ ಒತ್ತಡಗಳಿಗೆ ಮಣಿಯದಂತೆ ಅಧಿಕಾರಿಗಳಿಗೆ ಸಚಿವರು ಅಭಯ ನೀಡಿದರು. ಯಾವುದೇ ಪ್ರಭಾವಕ್ಕೂ ಒಳಗಾಗದೆ ಕೇವಲ ಕಾನೂನು ಪ್ರಕಾರವೇ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕು ಎಂದು ಸ್ಪಷ್ಟಪಡಿಸಿದ ಅವರು, ಈ ಕುರಿತು ಪ್ರಾದೇಶಿಕ ಆಯುಕ್ತರು ಹಾಗೂ ಜನರಲ್ ಮ್ಯಾನೇಜರ್ ಅವರೊಂದಿಗೆ ವಿಶೇಷ ಸಭೆ ನಡೆಸಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದರು.
ಜೊತೆಗೆ, ಯುಕೆಪಿ 1, 2 ಹಾಗೂ 3ನೇ ಹಂತದ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಲು ಪ್ರತ್ಯೇಕ ಕಡತ ಸಿದ್ಧಪಡಿಸಿ, ಅದಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ, ವಿಜಯಪುರ ಭಾಗದ ತೋಟಗಾರಿಕಾ ರೈತರಿಗೆ ಯಾವುದೇ ರೀತಿಯಲ್ಲಿ ನೀರಿನ ಕೊರತೆಯಾಗದಂತೆ ಎಚ್ಚರವಹಿಸಲು ಸಚಿವರು ಸೂಚಿಸಿದರು.

ನಂದವಾಡಗಿ, ಕೆರೂರು, ಬೂದಿಹಾಳ, ಭಗವತಿ, ಪಾಮನಕಲ್ಲೂರು ಹಾಗೂ ಚಡಚಣ ಸೇರಿದಂತೆ ಪ್ರಮುಖ ಏತ ನೀರಾವರಿ ಯೋಜನೆಗಳಿಗೆ ವೇಗ ನೀಡಬೇಕು ಮತ್ತು ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿರುವ ಕಾಮಗಾರಿಗಳಿಗೆ ಮರು ಟೆಂಡರ್ ಕರೆದು ಸಾರ್ವಜನಿಕ ಹಣ ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದರು.
ಕೇಂದ್ರದ ಅನುದಾನ ತರಲು ಅಧಿಕಾರಿಗಳು ಶ್ರಮಿಸಬೇಕು
ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನಗಳನ್ನು ತರುವಲ್ಲಿ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆದು ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳ ಬೆನ್ನು ತಟ್ಟಿದರು. ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಯಾಂತ್ರೀಕೃತ ಗೇಟ್ ಅಳವಡಿಸಿ ನೀರಿನ ದಕ್ಷತೆ ಹೆಚ್ಚಿಸಿರುವುದು ಹಾಗೂ ರೈತರು ಆ್ಯಪ್ ಮೂಲಕ ನೀರಿನ ಬೇಡಿಕೆ ಸಲ್ಲಿಸುವ ವ್ಯವಸ್ಥೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು.

ಸಭೆಯ ಉದ್ದಕ್ಕೂ ಸಚಿವ ಚಲುವರಾಯಸ್ವಾಮಿ ಅವರ ಮಾತಿನಲ್ಲಿ ಕಾಮಗಾರಿಯ ‘ಗುಣಮಟ್ಟ’ದ ಬಗ್ಗೆ ಅತ್ಯಂತ ಕಾಳಜಿ ಎದ್ದು ಕಾಣುತ್ತಿತ್ತು. ಯಾವುದೇ ಸೇತುವೆ ಅಥವಾ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ, ಅಂದಾಜು ಪಟ್ಟಿ ತಯಾರಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಅವರು ತಾಕೀತು ಮಾಡಿದರು. “ನಾನು ಪರಿಶೀಲನೆ ನಡೆಸಿದಾಗ ಅಧಿಕಾರಿಗಳ ಕಳ್ಳಾಟ ಬಯಲಾದರೆ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ, ಜಿಲ್ಲಾಡಳಿತಕ್ಕೆ ನೀಡಿದ ಸರ್ಕಾರಿ ಹಣದ ನಯಾ ಪೈಸೆಯೂ ದುರ್ಬಳಕೆಯಾಗಬಾರದು. ಅದಕ್ಕಾಗಿ ಪದೇಪದೇ ಫಾಲೋಅಪ್ ಮಾಡಿ” ಎಂದು ನೇರ ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿಗಳು ಹಾಗೂ ತಮ್ಮ ಅಧಿಕಾರಾವಧಿಯಲ್ಲಿ ಇಲಾಖೆಯಲ್ಲಿ ಅದ್ಭುತ ಕೆಲಸಗಳಾಗಬೇಕು ಎಂಬ ಹೆಬ್ಬಯಕೆಯನ್ನು ಅವರು ವ್ಯಕ್ತಪಡಿಸಿದರು. ನಿಗಮದಲ್ಲಿನ ಸಿಬ್ಬಂದಿ ಕೊರತೆ ಹಾಗೂ ಅನುದಾನದ ಸಮಸ್ಯೆಗಳನ್ನ ಆದ್ಯತೆ ಮೇರೆಗೆ ಶೀಘ್ರವೇ ಬಗೆಹರಿಸುವುದಾಗಿ ಅಧಿಕಾರಿಗಳಿಗೆ ವಿಶ್ವಾಸ ತುಂಬಿದರು. ಸಭೆಯಲ್ಲಿ ಕೃಷ್ಣಾ ಜಲ ಭಾಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಗುತ್ತೆಗೆದಾರರೊಂದಿಗೆ ಸಭೆ
ಅಧಿಕಾರಿಗಳ ಸಭೆಯ ನಂತರ ಗುತ್ತಿಗೆದಾರರೊಂದಿಗೂ ಸಮಾಲೋಚನೆ ನಡೆಸಿದ ಸಚಿವರು, ಅಲ್ಲಿಯೂ ಕಾಮಗಾರಿಗಳ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಗುತ್ತಿಗೆದಾರರು ಮುಂದಿಟ್ಟ ಅನುದಾನ ಬಿಡುಗಡೆ, ಕಾಮಗಾರಿಗೂ ಮುನ್ನ ಶೇ.50ರಷ್ಟು ಠೇವಣಿ ಇಡುವುದು, ಕಾರ್ಯಾದೇಶ ವಿಳಂಬ ಹಾಗೂ ಪಾರದರ್ಶಕತೆಯ ಕೊರತೆಯಂತಹ ಸಮಸ್ಯೆಗಳನ್ನ ಆಲಿಸಿದ ಅವರು, “ನಾನು ಕೂಡ ಈ ಹಿಂದೆ ಗುತ್ತಿಗೆದಾರನಾಗಿದ್ದೆ, ಹಾಗಾಗಿ ನಿಮ್ಮೆಲ್ಲಾ ಸಮಸ್ಯೆಗಳ ಅರಿವು ನನಗಿದೆ. ಈ ಎಲ್ಲ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುತ್ತೇನೆ” ಎಂಬ ಭರವಸೆ ನೀಡಿದರು. ಸಚಿವರ ಈ ಸ್ಪಂದನೆಗೆ ಗುತ್ತಿಗೆದಾರರ ಸಂಘವು ಹರ್ಷ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿತು.
