ಮಂಡ್ಯದ ಒಕ್ಕಲಿಗ ವೀರರು ಎಂದು ಬಿಂಬಿಸಲಾಗುತ್ತಿರುವ ಉರಿಗೌಡ (Urigowda)- ನಂಜೇಗೌಡ (Nanjegowda) ಹೆಸರಿನಲ್ಲಿ ಸಿನಿಮಾವೊಂದು (Cinema) ಮೂಡಿ ಬರಲಿದೆ. ಹಲವು ದಿನಗಳಿಂದ ಈ ಹೆಸರು ವಿವಾದಕ್ಕೆ ಕಾರಣವಾಗಿದ್ದರೂ, ಈ ವೀರರ ಕುರಿತಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ ತೋಟಗಾರಿಕ ಸಚಿವ ಮುನಿರತ್ನ (Muniratna). ಈ ಸಿನಿಮಾ ಮಾಡಲೆಂದು ಅವರು ಎರಡು ಟೈಟಲ್ ಅನ್ನು ರಿಜಿಸ್ಟರ್ ಕೂಡ ಮಾಡಿಸಿದ್ದಾರೆ.
ಕುರುಕ್ಷೇತ್ರ ಸೇರಿದಂತೆ ಹಲವು ಭಾರೀ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮುನಿರತ್ನ, ಈ ಬಾರಿ ವಿವಾದಿದ ವ್ಯಕ್ತಿಗಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಉರಿಗೌಡ –ನಂಜೇಗೌಡ’ ಅಥವಾ ‘ನಂಜೇಗೌಡ-ಉರಿಗೌಡ’ ಎನ್ನುವ ಹೆಸರನ್ನೂ ಇಡಲಿದ್ದಾರೆ. ನಿನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪೆದ್ದಮ್ಮ ತಲ್ಲಿ ದೇವಿಗೆ ಸೀರೆ, ಗಾಜಿನ ಬಳೆ ಅರ್ಪಣೆ ಮಾಡಿದ ಸಮಂತಾ
ಈ ಕುರಿತು ಖಚಿತ ಪಡಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್, ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿ, ‘ಸಚಿವ ಮುನಿರತ್ನ ಅವರ ಬ್ಯಾನರ್ ನಲ್ಲೇ ಎರಡು ಶೀರ್ಷಿಕೆಗಳನ್ನು ನೋಂದಾಯಿಸಲು ನಿನ್ನೆ ಅರ್ಜಿ ಸಲ್ಲಿಸಿದ್ದಾರೆ. ಕಮೀಟಿಯಲ್ಲಿ ಎರಡೂ ಶೀರ್ಷಿಕೆಗಳನ್ನು ಇಟ್ಟು ಟೈಟಲ್ ಕೊಡುವ ಕುರಿತು ತೀರ್ಮಾನ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
ಉರಿಗೌಡ ಹಾಗೂ ನಂಜೇಗೌಡ ಮಂಡ್ಯದ ಕಲಿಗಳು. ಅವರು ಟಿಪ್ಪು ಸುಲ್ತಾನ್ ನನ್ನು ಕೊಂದವರು ಎಂದು ಒಂದು ಗುಂಪು ಹೇಳುತ್ತಿದ್ದರೆ, ಈ ರೀತಿಯ ಹೆಸರಿನ ಯಾವುದೇ ಕಲಿಗಳು ಇರಲಿಲ್ಲ. ಅವರು ಟಿಪ್ಪುವನ್ನು ಕೊಂದಿಲ್ಲ. ಇಬ್ಬರೂ ವ್ಯಕ್ತಿಗಳು ಕಾಲ್ಪನಿಕ ಕಥೆಯಲ್ಲಿ ಹುಟ್ಟಿಕೊಂಡ ಪಾತ್ರಗಳು ಎನ್ನುವ ಚರ್ಚೆ ಹಲವು ದಿನಗಳಿಂದ ನಡೆದಿದೆ. ಸಿನಿಮಾದಲ್ಲಿ ಈ ಪಾತ್ರಗಳನ್ನು ಯಾವ ರೀತಿಯಲ್ಲಿ ತೋರಿಸಲಿದ್ದಾರೆ ಎನ್ನುವ ಕುತೂಹಲ ಸದ್ಯಕ್ಕಿದೆ.