ಹಾಸನ: ಮಸ್ತಕಾಭಿಷೇಕ ಕಾಮಗಾರಿಯಲ್ಲಿ ಕಮೀಷನ್ ಪಡೆದಿರುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಆರೋಪಕ್ಕೆ ಸಚಿವ ಎ ಮಂಜು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸ್ತಕಾಭಿಷೇಕ ಕಾಮಗಾರಿಯಲ್ಲಿ ನಾನು ಕಮೀಷನ್ ಪಡೆದಿರುವುದಾಗಿ ಮಾಜಿ ಪ್ರಧಾನಿಯವರು ಹೇಳಿದ್ದಾರೆ. ಮಾಜಿ ಪ್ರಧಾನಿ ಆರೋಪ ನನಗೆ ಅತೀವ ನೋವು ತಂದಿದೆ. 2006 ಮಸ್ತಕಾಭಿಷೇಕ ಕಾಮಗಾರಿ ದಾಖಲೆಯನ್ನು ಅವರು ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದ ಮಂಜು, ಈ ಕುರಿತು ನಾನು ಬೆಂಗಳೂರಿನಲ್ಲೇ ಸುದ್ದಿಗೋಷ್ಠಿ ನಡೆಸಿ ಕಾಮಗಾರಿಯ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಅಂತ ಸಚಿವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಾನು ನಡೆದು ಬಂದ ದಾರಿ, ಹಿನ್ನೆಲೆ ಎಲ್ಲಾ ಹೇಳುವೆ. ಚುನಾವಣೆ ಸಂದರ್ಭದಲ್ಲಿ ಸಣ್ಣ ವಿಷಯಕ್ಕೆ ಖ್ಯಾತೆ ತೆಗೆಯುತ್ತಿದ್ದಾರೆ. ನಾನು ರಾಜಕೀಯದಲ್ಲಿದ್ದಾಗ ಕುಮಾರಸ್ವಾಮಿ ರಾಜಕೀಯದಲ್ಲಿ ಇರಲಿಲ್ಲ. ಅನಾಗರಿಕನಾಗಿ ನಾನು ಮಾತನಾಡಿಲ್ಲ, ಅವರಂತೆ ಛಿ, ಥೂ ಅಂತ ಮಾತನಾಡಿಲ್ಲ. ಇದು ದೇಶಕ್ಕೆ, ಮತದಾರರಿಗೆ ನಾಚಿಗೇಡಿನ ವಿಷಯವಾಗಿದೆ. ದೇವೇಗೌಡರು ಬಾರದೇ ಹೋದ್ರೆ ಮಸ್ತಕಾಭಿಷೇಕ ನಿಂತು ಹೋಗುತ್ತಾ? ಇಂಥ ಮಾತಾಡುವುದನ್ನು ನಿಲ್ಲಿಸಬೇಕು. ಇಲ್ಲವಾದ್ರೆ ನನಗೂ ಮಾತನಾಡುವುದು ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಡಿಸಿ ವರ್ಗ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ಅಧಿಕಾರಿ ಸರಕಾರದ ಸೇವಕರು, ಹುದ್ದೆ ಮುಖ್ಯವಲ್ಲ, ಕಾರ್ಯ ನಿರ್ವಹಣೆ ಮುಖ್ಯ ಅಂತ ಅವರು ತಿಳಿಸಿದ್ರು.