– ಇನ್ವೆಸ್ಟ್ ಕರ್ನಾಟಕ; ದೆಹಲಿಯಲ್ಲಿ ಯಶಸ್ವಿ ರೋಡ್‌ಷೋ
ನವದೆಹಲಿ: ಫೆ.11 ರಿಂದ 14 ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಇನ್ವೆಸ್ಟ್ ಕರ್ನಾಟಕ 2025’ರ ಪೂರ್ವಸಿದ್ಧತೆಗಳ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರವು ಬುಧವಾರ ಇಲ್ಲಿ ಯಶಸ್ವಿಯಾಗಿ ರೋಡ್‌ಷೋ ನಡೆಸಿತು.
Advertisement
ಐಟಿಸಿ ಲಿಮಿಟೆಡ್, ರಿನ್ಯೂ ಪವರ್, ಸಂವರ್ಧನ ಮದರ್‌ಸನ್ ಇಂಟರ್‌ನ್ಯಾಷನಲ್ ಲಿಮಿಟೆಡ್, ಹ್ಯಾವೆಲ್ಸ್, ಕೆಇಐ ಇಂಡಸ್ಟ್ರೀಸ್, ದಾಲ್ಮಿಯಾ, ಫ್ಲೆಕ್ಸಿಬಸ್ ಮತ್ತಿತರ ಕಂಪನಿಗಳ ಉನ್ನತಾಧಿಕಾರಿಗಳ ಜೊತೆಗೆ ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಲಭ್ಯ ಇರುವ ಹೂಡಿಕೆಯ ವಿಫುಲ ಅವಕಾಶಗಳ ಬಗ್ಗೆ ಸಚಿವರು ಉದ್ಯಮಿಗಳಿಗೆ ಮನವರಿಕೆ ಮಾಡಿಕೊಟ್ಟು ಸಮಾವೇಶದಲ್ಲಿ ಭಾಗಿಯಾಗಲು ಔಪಚಾರಿಕ ಆಹ್ವಾನ ನೀಡಿದರು.
Advertisement
ರಾಜ್ಯದಲ್ಲಿನ ಬಂಡವಾಳ ಹೂಡಿಕೆ ಅವಕಾಶಗಳ ಜೊತೆಗೆ, ಪಾಲುದಾರಿಕೆ ಹಾಗೂ ನಾವೀನ್ಯತೆ ಆಧಾರಿತ ಉದ್ದಿಮೆಗಳಲ್ಲಿನ ರಾಜ್ಯದ ಹಿರಿಮೆಯನ್ನು ದೇಶದ ರಾಜಧಾನಿಯಲ್ಲಿನ ಉದ್ಯಮಿಗಳಿಗೆ ಪರಿಚಯಿಸಲಾಯಿತು.
Advertisement
ರಾಜ್ಯದ ಆಹಾರ ಸಂಸ್ಕರಣಾ ವಲಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಹಾಗೂ ವಿಲಾಸಿ ಆತಿಥ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿಸಿ ಲಿಮಿಟೆಡ್, ಈ ಕ್ಷೇತ್ರಗಳಲ್ಲಿ ತನ್ನ ವಹಿವಾಟು ವಿಸ್ತರಿಸುವುದಾಗಿ ವಾಗ್ದಾನ ಮಾಡಿದೆ.
Advertisement
‘ಐಟಿಸಿ ಲಿಮಿಟೆಡ್‌ನ ಈ ಹೂಡಿಕೆ ಪ್ರಸ್ತಾವಗಳು ರಾಜ್ಯದಲ್ಲಿ ಮೂಲಸೌಲಭ್ಯಗಳಿಗೆ ಉತ್ತೇಜನ ನೀಡಲಿವೆ. ಉದ್ಯೋಗ ಅವಕಾಶಗಳು ಹೆಚ್ಚಿಸಲಿವೆ. ಇದರಿಂದ ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ದೊರೆಯಲಿದೆ’ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.
ನವೀಕರಿಸಬಹುದಾದ ಇಂಧನ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ರಿನ್ಯೂ ಪವರ್, ಕರ್ನಾಟಕದಲ್ಲಿನ ತನ್ನ ಹೂಡಿಕೆಯ ನೀಲನಕ್ಷೆಯನ್ನು ಸಚಿವರ ಜೊತೆಗೆ ಹಂಚಿಕೊಂಡಿತು. 3 ರಿಂದ 4 ಗಿಗಾವಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಯೋಜನೆ, ಬ್ಯಾಟರಿ ತಯಾರಿಕೆ ಮತ್ತು ಮರುಬಳಕೆ ಸೌಲಭ್ಯ ಹಾಗೂ ಸ್ಥಳೀಯ ಉದ್ಯೋಗಿಗಳ ಕೌಶಲ ವರ್ಧನೆಗೆ ಕೌಶಲ ಕೇಂದ್ರ ಸ್ಥಾಪಿಸುವುದಾಗಿ ತಿಳಿಸಿದೆ.
ಸಂವರ್ಧನ ಮದರ್‌ಸನ್ – ರಾಜ್ಯದಲ್ಲಿನ ತನ್ನ ಉದ್ದೇಶಿತ ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸುವುದಾಗಿ ತಿಳಿಸಿದೆ. ಯೋಜನೆಯು ಸಕಾಲದಲ್ಲಿ ಕಾರ್ಯಾರಂಭ ಮಾಡಲು ರಾಜ್ಯ ಸರ್ಕಾರದ ಅಗತ್ಯ ನೆರವು ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ವಿದ್ಯುತ್ ಸಲಕರಣೆ ಮತ್ತು ಗೃಹೋಪಯೋಗಿ ಉಪಕರಣಗಳ ಪ್ರಮುಖ ತಯಾರಿಕಾ ಕಂಪನಿ ಹ್ಯಾವೆಲ್ಸ್, ರಾಜ್ಯದಲ್ಲಿನ ತನ್ನ ಸಂಶೋಧನೆ ಹಾಗೂ ಅಭಿವೃದ್ಧಿ (ಆರ್‌ಆ್ಯಂಡ್‌ಡಿ) ಕೇಂದ್ರವನ್ನು ವಿಸ್ತರಿಸಲು ಒಲವು ವ್ಯಕ್ತಪಡಿಸಿದೆ.
ಕೇಬಲ್ ತಯಾರಿಕೆಯ ಹೊಸ ಘಟಕವನ್ನು ಆರಂಭಿಸುವುದಾಗಿ ಕೆಇಐ ಇಂಡಸ್ಟ್ರೀಸ್ ಆಸಕ್ತಿ ತೋರಿಸಿದೆ. ರಾಜ್ಯದಲ್ಲಿ ತನ್ನ ಹೂಡಿಕೆ ಹೆಚ್ಚಿಸುವುದಾಗಿ ದಾಲ್ಮಿಯಾ ಸಿಮೆಂಟ್ ಬದ್ಧತೆ ತೋರಿದೆ. ‘ಪ್ರಗತಿಯ ಮರುಪರಿಕಲ್ಪನೆ’ ಧ್ಯೇಯದ ಇನ್ವೆಸ್ಟ್ ಕರ್ನಾಟಕವು ನಾವೀನ್ಯತೆ, ಸುಸ್ಥಿರತೆ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಲರಿಗೂ ಸಮಾನ ಪಾಲು ಒದಗಿಸಲಿರುವ ಜಾಗತಿಕ ಹೂಡಿಕೆಯ ಶೃಂಗಸಭೆಯಾಗಿರಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಅವರು ಉದ್ಯಮಿಗಳ ಜೊತೆಗಿನ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.