ಬೆಂಗಳೂರು: ಗುರುವಾರ ತಡರಾತ್ರಿವರೆಗೆ ಸಿಟಿ ರೌಂಡ್ಸ್ ನಡೆಸಿದ ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣಬೈರೇಗೌಡ (Krishna Byregowda) ಅವರು ಹಲವು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲೇ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮಹದೇವಪುರದ ಲೌರಿ ಸರ್ಕಲ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ರಸ್ತೆಯ ಎರಡು ಕಡೆಗಳಲ್ಲಿ ಪರಿಶೀಲನೆ ನಡೆಸಿದ್ರು. ರಾತ್ರಿ 10:30ವರೆಗೆ ಶುರುವಾದ ರೌಂಡ್ಸ್ ತಡರಾತ್ರಿ 2:30ರ ತನಕ ನಡೆಯಿತು. ಈ ವೇಳೆ ಎಲ್ಲಾ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಹಾಜರಿದ್ದು, ಅವ್ಯವಸ್ಥೆಗಳ ವಿರುದ್ಧ ಸ್ಥಳದಲ್ಲೇ ಸಚಿವರು ಕ್ಲಾಸ್ ತಗೊಂಡು ಸರಿಯಾಗಿ ಕೆಲಸ ಮಾಡುವಂತೆ ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿಲ್ಲ, ಸ್ಥಳಾಂತರಿಸುತ್ತಿದ್ದೇವೆ: ಕೃಷ್ಣ ಬೈರೇಗೌಡ
ಇದೇ ವೇಳೆ ಮಾತಾಡಿದ ಸಚಿವರು, ನಗರದಲ್ಲಿ ಪುಟ್‌ಪಾತ್ ತೆರವು ಕಾರ್ಯಚರಣೆಗೆ ಕೆಲವರಿಂದ ವಿರೋಧ ವ್ಯಕ್ತವಾಗ್ತಿದೆ. ಆದ್ರೆ ಯಾವುದೇ ಕಾರಣಕ್ಕೂ ಈ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ. ಮುಖ್ಯರಸ್ತೆಗಳಿಂದ ಮಾತ್ರ ತೆರವು ಮಾಡ್ತಿದ್ದೀವಿ. ನಗರದ ಇನ್ನುಳಿದ ರಸ್ತೆಗಳಲ್ಲಿ ಈಗಲೂ ವ್ಯಾಪಾರ ಮಾಡಿಕೊಳ್ಳಬಹುದು. ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಮಸ್ಯೆ ಆಗದಂತೆ ತಡೆಯಲು ಮಾತ್ರ ಈ ಕೆಲಸ ಮಾಡ್ತಿದ್ದೇವೆ. ಇನ್ನೂ ಟ್ರಾಫಿಕ್ ಸಮಸ್ಯೆ ಇರುವ ರಸ್ತೆಗಳನ್ನು ರಿ-ಡಿಸೈನ್ ಮಾಡಬೇಕಿದೆ. ಅದಕ್ಕೆ ಬೇಕಿರುವ ತಯಾರಿಗಳನ್ನು ಮಾಡಿಕೊಂಡು ರಿ-ಡಿಸೈನ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
