ಬೆಂಗಳೂರು: ಸರ್ಕಾರದಲ್ಲಿ ಭ್ರಷ್ಟಾಚಾರ ಎಂಬುವುದು ಎಲ್ಲಾ ಹಂತಗಳಲ್ಲೂ ವ್ಯಾಪಿಸಿದೆ. ಯಾರೂ ಕೂಡಾ ನಾನು ಅಪರಂಜಿ ಅಂತಾ ಹೇಳಿಕೊಂಡರೆ ಅದು ಆತ್ಮವಂಚನೆಯಾಗುತ್ತದೆ. ನಾನು ಸೇರಿದಂತೆ ಯಾರೂ 24 ಕ್ಯಾರೆಟ್ ಬಂಗಾರ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಸಚಿವರು, ಇಲಾಖೆಯ ಕುರಿತ ಮಾಹಿತಿ ಪಡೆದರು. ಈ ವೇಳೆ ಸಿಎಂ ಕುಮಾರಸ್ವಾಮಿ ಅವರ ಭ್ರಷ್ಟಾಚಾರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಆಡಳಿತ ವ್ಯವಸ್ಥೆ ಕಳೆದ 20 ವರ್ಷಗಳಿಂದ ಕಾಲ ಕ್ರಮೇಣ ಕುಸಿಯುತ್ತಾ ಬಂದಿದೆ. ಯಾವ ಸುಧಾರಣೆ ಮಾಡಲು ಸಾಧ್ಯವೋ ಅದನ್ನು ನಾವು ಮಾಡಬೇಕು. ಮುಖ್ಯಮಂತ್ರಿಗಳು ಕೂಡಾ ಅದನ್ನೇ ಹೇಳಿದ್ದಾರೆ ಎಂದು ತಿಳಿಸಿದರು.
Advertisement
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಓರ್ವ ನುರಿತ ಆಡಳಿತಗಾರರು. ಸದ್ಯ ಮುಖ್ಯಮಂತ್ರಿಗಳು ಹೇಳಿದ್ದು ವಿಧಾನಸೌಧ ಕಾರಿಡಾರ್ ಬಗ್ಗೆ, ನಾನು ಐದು ವರ್ಷ ಇದ್ದಿದ್ದು ವಿಕಾಸಸೌಧ ಕಾರಿಡಾರ್ ನಲ್ಲಿ. ಭ್ರಷ್ಟಾಚಾರ ಎಲ್ಲಾ ಹಂತಗಳಲ್ಲೂ ವ್ಯಾಪಿಸಿಕೊಂಡಿದೆ. ಯಾರೂ ಕೂಡಾ ನಾನು ಅಪರಂಜಿ ಎಂದು ಹೇಳಿಕೊಂಡರೆ ಅದು ಆತ್ಮವಂಚನೆಯಾಗುತ್ತದೆ. ನಮ್ಮ ಕೆಲಸ ನಾವು ಪ್ರಾಮಾಣಿಕತೆಯಿಂದ ಮಾಡಿದರೆ ಅದು ಸಮಾಜಕ್ಕೆ ಕೊಡಬಹುದಾದ ಕೊಡುಗೆ. ಈ ಕುರಿತು ಬೇರೆ ಯಾರ ಬಗ್ಗೆಯೂ ಮಾತನಾಡಲ್ಲ ಎಂದು ಹೇಳಿದರು.
Advertisement
ಐತಿಹಾಸಿಕ ಖಾತೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ (ಆರ್ ಡಿಪಿಆರ್) ಬಹಳ ಐತಿಹಾಸಿಕ ಖಾತೆಯಾಗಿದ್ದು, ನನ್ನ ಅರ್ಹತೆ ಮತ್ತು ಅನುಭವದಲ್ಲಿ ಹಿಂದೆ ನಿರ್ವಹಿಸಿರುವವರಿಗಿಂತ ನಾನೇ ಕಡಿಮೆ ಇದ್ದೇನೆ. ಒಬ್ಬರಿಗಿಂತ ಒಬ್ಬರು ದಿಗ್ಗಜರೇ ಈವರೆಗೆ ಆರ್ ಡಿಪಿಆರ್ ಖಾತೆಯನ್ನು ನಿರ್ವಹಿಸಿದ್ದಾರೆ. ಈ ಹಿಂದೆ ಐದು ವರ್ಷ ಕೃಷಿ ಖಾತೆಯನ್ನು ನಿರ್ವಹಿಸಿದ್ದು, ಜವಾಬ್ದಾರಿಯನ್ನು ಬಹಳ ಎಚ್ಚರಿಕೆಯಿಂದ ಸ್ವೀಕಾರ ಮಾಡಿದ್ದೇನೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಪರಿಚಯ ಮತ್ತು ಪರಿಶೀಲನೆಗೆ ಐದು ದಿನ ಮೀಸಲಿಟ್ಟಿದ್ದು, ಸವಾಲುಗಳು ಇರುವ ಖಾತೆಯಲ್ಲಿ ನಾನು ಆತ್ಮನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದರು.
Advertisement
ಉತ್ತಮ ಮಳೆ: ಆರ್ ಡಿಪಿಆರ್ ಖಾತೆಯಲ್ಲಿ ಕುಡಿಯುವ ನೀರಿನ ನಿರ್ವಹಣೆ ದೊಡ್ಡ ಜಬಾವ್ದಾರಿ. ಸದ್ಯ ಮಳೆ ಚೆನ್ನಾಗಿ ಆಗುತ್ತಿರುವುದರಿಂದ ನೀರಿನ ಸಮಸ್ಯೆ ಎದುರಾಗಲ್ಲ. ಅದರು ರಾಜ್ಯದ 248 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.