ಉಡುಪಿ: ಪಾಲಿಕೆ ಚುನಾವಣೆ ಫಲಿತಾಂಶದ ಮೂಲಕ ರಾಜ್ಯದಲ್ಲಿ ಬಿಜೆಪಿ ವಾತಾವರಣ ಉತ್ತಮವಾಗುತ್ತಿದೆ. ಕಾಂಗ್ರೆಸ್‍ನ ಅಪಪ್ರಚಾರ ರಾಜ್ಯದ ಜನಕ್ಕೆ ಅರ್ಥ ಆಗಿದೆ ಹಾಗಾಗಿ ಸರಿಯಾದ ಉತ್ತರ ನೀಡಿದ್ದಾರೆ ಎಂದು ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಪ್ರಚಾರ ಮತ್ತು ಅಪಪ್ರಚಾರದಲ್ಲಿ ತಿರುಳಿಲ್ಲ ಎಂಬುದು ರಾಜ್ಯದ ಜನಕ್ಕೆ ಗೊತ್ತಾಗಿದೆ. ಜನ ಬಿಜೆಪಿ ಮತ್ತು ಪ್ರಧಾನಿ ಮೋದಿಯ ಕಾರ್ಯಶೈಲಿಗೆ ಮತ ಹಾಕಿದ್ದಾರೆ. ಸಿಎಂ ಬೊಮ್ಮಾಯಿ ಓಡಾಟ, ಸಂಘಟನಾತ್ಮಕ ಚಟುವಟಿಕೆಯನ್ನು ನೋಡಿ ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಜನಪರವಾಗಿರುವ ಬಿಜೆಪಿಗೆ ಮತದಾರ ಆಶೀರ್ವಾದ ಮಾಡಿದ್ದಾನೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಗೆ ಎಲ್ಲಾ ಕಡೆ ಬಹುಮತ ಬಂದಿದೆ. ಅತಂತ್ರ ಇದ್ದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಗರಾಡಳಿತ ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿದೆ. ಇಡೀ ರಾಜ್ಯದಲ್ಲಿ ಬಿಜೆಪಿಯ ವಾತಾವರಣ ಉತ್ತಮ ಆಗುತ್ತಿದ್ದು, ಸಮಸ್ಯೆ ಬಗೆಹರಿಸುವ ಶಕ್ತಿ ಬಿಜೆಪಿಗೆ ಇದೆ. ಉತ್ತಮ ಆಡಳಿತ ಕೊಡಲು ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ, ಎಲ್ಲಾ ಮತದಾರರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಸಿಕ್ಕರೂ ಬಿಜೆಪಿ ಅಧಿಕಾರಕ್ಕೆ
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಯಾಕೆ ಸೈಲೆಂಟ್ ಆಗಿದೆ ಗೊತ್ತಿಲ್ಲ. ಜೆಡಿಎಸ್ ಸ್ಪರ್ಧೆ ಮಾಡದಿರುವಲ್ಲಿ ನಮ್ಮ ಸ್ಥಾನಗಳು ಹೆಚ್ಚಾಗಿದೆ. ಜನ ಈ ಬಾರಿ ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ. ನಗರವ್ಯಾಪ್ತಿಯ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ದೇಶದಲ್ಲಿ ಬಿಜೆಪಿ ಉತ್ತಮ ಆಡಳಿತ ಮಾಡುತ್ತಿದೆ ಎಂದರು. ಇದನ್ನೂ ಓದಿ: ಪಾಲಿಕೆ ಚುನಾವಣಾ ಫಲಿತಾಂಶ- ಮತದಾರರಿಗೆ, ಪಕ್ಷದ ಹಿರಿಯ ನಾಯಕರಿಗೆ ಸಿಎಂ ಧನ್ಯವಾದ