ಬೆಂಗಳೂರು: ಗ್ರಾಮ ಪಂಚಾಯಿತಿ (Gram Panchayat) ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿ ಅನರ್ಹ ರೇಷನ್ ಕಾರ್ಡ್‌ಗಳನ್ನ ರದ್ದು ಮಾಡುವುದಾಗಿ ಸಚಿವ ಕೆ.ಹೆಚ್ ಮುನಿಯಪ್ಪ (KH Muniyappa) ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿಂದು ರೇಷನ್ ಕಾರ್ಡ್ (Ration Card) ರದ್ದು ವಿಷಯ ಪ್ರಸ್ತಾಪ ಆಯ್ತು. ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ತಿಪ್ಪೇಸ್ವಾಮಿ ಪ್ರಶ್ನೆ ಕೇಳಿದ್ರು. ರೇಷನ್ ಕಾರ್ಡ್ ಹಂಚಿಕೆಯಲ್ಲಿ ಗೊಂದಲ ಆಗಿದೆ. ಅನೇಕ ಜನರ ರೇಷನ್ ಕಾರ್ಡ್ ರದ್ದು ಆಗಿದೆ. ಈ ಗೊಂದಲ ಸರಿ ಮಾಡಿ, ಮಾಹಿತಿ ಪ್ರಕಾರ 25 ಲಕ್ಷ ರೇಷನ್ ಕಾರ್ಡ್ ರದ್ದು ಆಗಿದೆ ಅಂತ ಆರೋಪ ಮಾಡಿದ್ರು.
ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ಆಹಾರ ಭದ್ರತಾ ಕಾಯ್ಡೆ ಯುಪಿಎ ಸರ್ಕಾರ ಜಾರಿ ಮಾಡಿತು. ಕರ್ನಾಟಕದಲ್ಲಿ 2014 ಎಲ್ಲಿ ಜಾರಿ ಆಯ್ತು? BPL, APL ಕಾರ್ಡ್‌ಗಳು ಸೇರಿ ಒಟ್ಟು 1,53,64,648 ಕಾರ್ಡ್ ಗೆ ರೇಷನ್ ಕೊಡ್ತಿದ್ದೇವೆ. ಒಟ್ಟು 5,29,01,752 ಫಲಾನುಭವಿಗಳಿಗೆ ರೇಷನ್ ಕೊಡಲಾಗ್ತಿದೆ. BPL ಕಾರ್ಡ್ ಗಳನ್ನ ರದ್ದು ಮಾಡಿಲ್ಲ. ಆದಾಯ 1.20 ಲಕ್ಷ ಇರೋರಿಗೆ, ತೆರಿಗೆ ಕಟ್ಟೋರಿಗೆ ಮಾತ್ರ ಕಾರ್ಡ್ ರದ್ದು ಆಗಿದೆ. ಉಳಿದ ಯಾರಿಗೂ ಕಾರ್ಡ್ ರದ್ದು ಮಾಡೊಲ್ಲ ಅಂತ ಭರವಸೆ ಕೊಟ್ರು.
ಮುಂದುವರಿದು… APL ಕಾರ್ಡ್ ಗೆ ರೇಷನ್ ಕೊಡೋದು ಈಗ ನಿಲ್ಲಿಸಿದ್ದೇವೆ. 25 ಲಕ್ಷ ಕಾರ್ಡ್ ನಲ್ಲಿ 1 ಲಕ್ಷ ಕಾರ್ಡ್ ಜನರು ಮಾತ್ರ ರೇಷನ್ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಸದ್ಯಕ್ಕೆ APL ಕಾರ್ಡ್ ಗೆ ರೇಷನ್ ಕೊಡ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
APL ಕಾರ್ಡ್ ಅರ್ಹತೆ ಇರೋರು BPL ಕಾರ್ಡ್ ಪಡೆದಿದ್ದಾರೆ. ಈ ರೀತಿ 20% ಕಾರ್ಡ್ ಗಳು ರಾಜ್ಯದಲ್ಲಿವೆ. ಇದನ್ನ ಪರಿಷ್ಕರಣೆ ಮಾಡೋಕೆ ಮುಂದಾಗಿದ್ದೇವೆ. ಆದರೆ ಗೊಂದಲ ಆಯ್ತು, ಹೀಗಾಗಿ ಸದ್ಯಕ್ಕೆ ಪರಿಷ್ಕರಣೆ ನಿಲ್ಲಿಸಿದ್ದೇನೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಇದನ್ನ ಸರಿಯಾಗಿ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡ್ತೀವಿ. BPL ಕಾರ್ಡ್ ಒಬ್ಬರಿಗೂ ಸಮಸ್ಯೆ ಇಲ್ಲದಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಕರ್ನಾಟಕದಲ್ಲಿ ರೇಷನ್ ಕಾರ್ಡ್ ಜಾಸ್ತಿ ಆಗಿರೋದಕ್ಕೆ ಎಲ್ಲಾ ಸರ್ಕಾರಗಳು ಕಾರಣ. ಅದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಂತ ಇಲ್ಲ. ಈಗ ಕಾರ್ಡ್ ಪರಿಷ್ಕರಣೆ ಮಾಡಿದ್ರೆ ಗೊಂದಲ ಆಗಿದೆ. ಇದಕ್ಕೂ ರಾಜಕೀಯ ಪಕ್ಷಗಳು ಕಾರಣ ಆಗುತ್ತದೆ. ಹೀಗಾಗಿ ಕೂಲಂಕಷವಾಗಿ ಪರಿಶೀಲಿಸಿ ಪರಿಷ್ಕರಣೆ ಮಾಡ್ತೀವಿ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಸರಿಯಾಗಿ ಮಾಹಿತಿ ಪರಿಶೀಲನೆ ಮಾಡಿ BPL ಕಾರ್ಡ್ ಪರಿಷ್ಕರಣೆ ಮಾಡ್ತೀವಿ. ಬಳಿಕ APL ಕಾರ್ಡ್ ಪರಿಷ್ಕರಣೆ ಮಾಡೋ ಕೆಲಸ ಮಾಡ್ತೀವಿ ಅಂತ ತಿಳಿಸಿದರು.