ನವದೆಹಲಿ: ರಾಜ್ಯದ ಕೊಬ್ಬರಿ ಮತ್ತು ಅಡಿಕೆ ಬೆಳೆಗಾರರು ಸೇರಿದಂತೆ ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರೊಂದಿಗೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಮಹತ್ವದ ಮಾತುಕತೆ ನಡೆಸಿದ್ದಾರೆ.
ಬೃಹತ್ ಕೈಗಾರಿಕೆ ಸಚಿವಾಲಯಕ್ಕೆ ಆಗಮಿಸಿದ ಚೌಹಾಣ್ ಅವರು ಕುಮಾರಸ್ವಾಮಿ ಅವರಿಗೆ ತಮ್ಮ ಪುತ್ರರಿಬ್ಬರ ವಿವಾಹಕ್ಕೆ ಆಮಂತ್ರಣ ನೀಡಿದರು. ಇದೇ ವೇಳೆ ಸಚಿವರಿಬ್ಬರು ಕರ್ನಾಟಕ ಸೇರಿದಂತೆ ರಾಷ್ಟ್ರದ ಕೃಷಿ ಕ್ಷೇತ್ರದ ಆಗುಹೋಗುಗಳು, ರೈತರ ಕುಂದುಕೊರತೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
Advertisement
ಅಡಿಕೆಗೆ ಬರುತ್ತಿರುವ ರೋಗಗಳ ಪರಿಹಾರಕ್ಕೆ 67 ಕೋಟಿ ರೂ. ಮುಂದಿನ ಬಜೆಟ್ನಲ್ಲಿ ಘೋಷಣೆ ಮಾಡಲಾಗುವುದು ಎಂದು ಚೌಹಾಣ್ ಅವರು ಘೋಷಣೆ ಮಾಡಿದ್ದು, ಆ ಬಗ್ಗೆ ಹೆಚ್ಡಿಕೆ ಕೃಷಿ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಅಗತ್ಯ ಮಾರುಕಟ್ಟೆ ಸೌಲಭ್ಯದ ಕೊರತೆ ಹಾಗೂ ಬೆಳೆ ತೆಗೆಯುವ ಬಗ್ಗೆ ಸವಾಲು ಎದುರಿಸುವ ರೈತರಿಗೆ ಸಹಾಯ ಹಸ್ತ ಬೇಕಿದೆ. ಈ ನಿಟ್ಟಿನಲ್ಲಿ ತಾವು ನೀಡಿರುವ ಭರವಸೆ ರೈತರಲ್ಲಿ ಹರ್ಷ ಮೂಡಿಸಿದೆ ಎಂದು ಅವರು ಚೌಹಾಣ್ ಅವರಿಗೆ ತಿಳಿಸಿದ್ದಾರೆ.
Advertisement
Advertisement
ಕರ್ನಾಟಕದ ತೆಂಗು ಬೆಳೆಗಾರರು ಎದುರಿಸುತ್ತಿರುವ ಕಠಿಣ ಸವಾಲುಗಳ ಬಗ್ಗೆ ಕೃಷಿ ಸಚಿವರ ಗಮನ ಸೆಳೆದು, ತೆಂಗು ಬೆಳೆಗಾರರ ಸಂಕಷ್ಟ ಪರಿಹಾರ ಮಾಡುವ ನಿಟ್ಟಿನಲ್ಲಿ ತಮ್ಮ ಕಡೆಯಿಂದ ದೊಡ್ಡ ಉಪಕ್ರಮ ಆಗಬೇಕಿದೆ. ಈ ನಿಟ್ಟಿನಲ್ಲಿ ತಾವು ರಾಜ್ಯದಲ್ಲಿ ತೆಂಗು ಬೆಳೆಗಾರರ ಸಮಾವೇಶ ನಡೆಸಿ ಅವರ ಸಂಕಷ್ಟಗಳಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Advertisement
ಸಮಾವೇಶ ನಡೆಸುವ ಹೆಚ್ಡಿಕೆ ಸಲಹೆಗೆ ತಕ್ಷಣವೇ ಸ್ಪಂದಿಸಿದ ಸಚಿವರು; ಇದು ಬಹಳ ಒಳ್ಳೆಯ ಆಲೋಚನೆ. ಬೆಳೆಗಾರರು ತಮ್ಮೆಲ್ಲ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಿ. ಅನಂತರ ಪರಿಹಾರೋಪಾಯಗಳನ್ನು ಕಂಡುಕೊಳ್ಳೋಣ ಎಂದಿದ್ದಾರೆ.
ದುಬಾರಿ ಸಾಗಾಣಿಕೆ ವೆಚ್ಚವೇ ತೆಂಗು ಬೆಳೆಗಾರರಿಗೆ ದೊಡ್ಡ ಸಮಸ್ಯೆ ಆಗಿದೆ. ರೈತನ ಬಹುತೇಕ ಆದಾಯ ಸಾಗಾಣಿಕೆಗೆ ವ್ಯಯವಾಗುತ್ತಿದೆ. ಅವರಿಗೆ ನ್ಯಾಯಯುತ ಬೆಲೆ ಧಕ್ಕಿಸಿಕೊಡುವುದರ ಜೊತೆಗೆ ಸಾಗಾಣಿಕೆ ವ್ಯವಸ್ಥೆಯನ್ನು ರೈತರ ಕೈಗೆಟುಕುವಂತೆ ಮಾಡುವುದು ಅತ್ಯಗತ್ಯವಾಗಿದೆ. ಇದಕ್ಕೆ ಕೃಷಿ ಸಚಿವಾಲಯದ ನೆರವು ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.
ಕೃಷಿ ಉತ್ಪನ್ನಗಳ ಸರಪಳಿಯಿಂದ ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಅಗತ್ಯತೆಯ ಬಗ್ಗೆಯೂ ಇಬ್ಬರೂ ಸಚಿವರು ಚರ್ಚೆ ನಡೆಸಿದರು. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಗಳ ಉಪಟಳ ಮೇರೆ ಮೀರಿದೆ. ಕೇಂದ್ರ ಸರ್ಕಾರದಿಂದ ಎಷ್ಟೇ ಅನುಕೂಲಕರ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ರೈತರ ಸಂಕಷ್ಟ ಬಗೆಹರಿದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಉತ್ತಮ ಬೆಲೆ ಖಾತರಿ ಜತೆಗೆ, ಬೆಳೆಗಳ ಅತ್ಯುತ್ತಮ ದಾಸ್ತಾನು ಖಾತರಿಯನ್ನು ರೈತರಿಗೆ ಕೊಡಬೇಕಿದೆ ಎಂಬ ಬಗ್ಗೆ ಸಚಿವರಿಬ್ಬರೂ ಚರ್ಚಿಸಿದ್ದಾರೆ.
ಫಲಾನುಭವಿಗಳಿಗೆ ಹಣ ನೇರ ವರ್ಗಾವಣೆ (ಡಿಬಿಟಿ) ಮೂಲಕ ರಸಗೊಬ್ಬರ ಸಬ್ಸಿಡಿಯನ್ನು ಸಕಾಲಕ್ಕೆ ತಲುಪಿಸುವ ಮಹತ್ವವನ್ನು ಕುಮಾರಸ್ವಾಮಿ ಅವರು ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೇ, ವಿಳಂಬವಿಲ್ಲದೆ ಇತರೆ ಸಹಾಯಧನವನ್ನು ನೇರವಾಗಿ ರೈತರಿಗೆ ತಲುಪಿಸುವುದು, ಅಧಿಕಾರಶಾಹಿಯ ಅನಗತ್ಯ ಹಸ್ತಕ್ಷೇಪದಿಂದ ಅವರನ್ನು ರಕ್ಷಿಸುವುದು ಸೇರಿದಂತೆ ಹಲವಾರು ಪ್ರಮುಖ ಅಂಶಗಳ ಬಗ್ಗೆ ಸಹ ಚರ್ಚೆ ನಡೆಸಿದ್ದಾರೆ.