ಚಿತ್ರದುರ್ಗ: ಮಕ್ಕಳೇ ಸಿಎಂ ಸಿದ್ದರಾಮಯ್ಯ ಯಾರು ಗೊತ್ತಾ? ಅವರು ಓದಿದ್ದು ಹೇಗೆ ಗೊತ್ತಾ.? ಅವರು ಒಂದು, ಎರಡು, ಮೂರು, ನಾಲ್ಕು ಓದಲೇ ಇಲ್ಲ. ಐದನೇ ಕ್ಲಾಸಿಗೆ ಹೋಗಿ ಬಿಎಸ್‍ಸಿ, ಎಲ್‍ಎಲ್‍ಬಿ ಮಾಡಿ ಈಗ ಮುಖ್ಯಮಂತ್ರಿ ಆಗಿದ್ದಾರೆ – ಇದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಅವರು ಸಿಎಂ ಸಿದ್ದರಾಮಯ್ಯ ಕುರಿತು ಮಕ್ಕಳ ಮುಂದೆ ಆಡಿದ ಮಾತುಗಳು.
ಶುಕ್ರವಾರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳೇ ನಿಮ್ಮಲ್ಲಿ ಯಾರಾದರು ಮುಖ್ಯಮಂತ್ರಿ ಆಗಿ, ಹಾಗಂತ ಐದನೇ ತರಗತಿಗೆ ನೇರವಾಗಿ ಸೇರಬೇಡಿ. ಒಂದನೇ ತರಗತಿಯಿಂದಲೇ ಶಾಲೆಗೆ ಹೋಗಿ. ಮತ್ತೆ ದನ ಕಾಯೋಕೊ ಹೋದಿರಿ ಹುಷಾರು ಎಂದು ಹೇಳಿದರು.
Advertisement
ಹಿಂದೆ ಜನಪದ ಗೀತೆಗಳು ಬದುಕಿಗೆ ಉತ್ತೇಜನ ನೀಡುತ್ತಿದ್ದವು. ಇಂದಿನ ಸಿನಿಮಾ ಹಾಡುಗಳು ದ್ವಂದ್ವದಿಂದ ಕೂಡಿರುತ್ತವೆ. ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಗೀತ ಶಿಕ್ಷಕರಿದ್ದಾರೆ ಒಳ್ಳೆಯದು. ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳಿಗೆ ಚಿತ್ರಕಲಾ ಹಾಗೂ ದೈಹಿಕ ಶಿಕ್ಷಕರನ್ನು ನೇಮಕ ಮಾಡುತ್ತೇವೆ ಎಂದರು.
Advertisement
ಇಂದು ಸರ್ಕಾರಿ ಶಾಲೆಗಳು ಅಂದ್ರೆ ಉದಾಸೀನ ಮಾಡುತ್ತಾರೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಸಂವಿಧಾನ ಬರೆದಿದ್ದಾರೆ. ವಿಜ್ಞಾನಿ ಯು.ಆರ್. ರಾವ್, ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರು ಸರ್ಕಾರಿ ಶಾಲೆಯಲ್ಲಿ ಓದಿದವರು. ಖಾಸಗಿ ಶಾಲೆಯಲ್ಲಿ ಓದುವವರಿಗೆ ಸರಿಸಮಾನವಾಗಿ ನಮ್ಮ ಮಕ್ಕಳನ್ನು ತಯಾರು ಮಾಡಲು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತೇವೆ ಎಂದು ತಿಳಿಸಿದರು.