– ಇಡಿ ದಾಳಿಗೆ ಸಿಡಿದೆದ್ದ ʻಕೈʼ ಪಡೆ – ಪರಮೇಶ್ವರ್ ಭೇಟಿ ಮಾಡಿ ಸ್ಥೈರ್ಯ ತುಂಬಿದ ನಾಯಕರು
ಬೆಂಗಳೂರು: ಅತ್ತ ತುಮಕೂರಿನಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಇಂದೂ ಮುಂದುವರಿದಿದೆ. ಇತ್ತ ಗೃಹ ಸಚಿವ ಪರಮೇಶ್ವರ್ (G Parameshwar) ಪರ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇಂದು ಬೆಳಗ್ಗೆ ಅನೇಕ ʻಕೈʼ ನಾಯಕರು (Congress Leaders) ಬೆಂಗಳೂರಿನ ನಿವಾಸದಲ್ಲಿ ಪರಮೇಶ್ವರ್ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ್ರು. ಇಡಿ ದಾಳಿ ಹಿನ್ನೆಲೆ ಕೇಂದ್ರದ ಬಿಜೆಪಿ ವಿರುದ್ಧ ಹೋರಾಟಕ್ಕೂ ಕಾಂಗ್ರೆಸ್ ಮುಂದಾಗಿದೆ.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲಿನ ಇಡಿ ದಾಳಿ ಈಗ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಅತ್ತ ತುಮಕೂರಿನಲ್ಲಿ ವಿರುದ್ಧ ಕೈ ದಾಳಿ 2ನೇ ದಿನಕ್ಕೆ ಕಾಲಿಟ್ರೆ, ಇತ್ತ ಪರಮೇಶ್ವರ್ ನಿವಾಸ ಒಂದಷ್ಟು ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯ್ತು. ಇಡಿ ದಾಳಿಯಾಗಿದ್ರೂ ನಿನ್ನೆಯಿಂದಲೂ ತುಮಕೂರಿಗೆ ಹೋಗದೇ ಪರಮೇಶ್ವರ್ ತಮ್ಮ ಬೆಂಗಳೂರು ನಿವಾಸದಲ್ಲೇ ಇದ್ದಾರೆ. ಇಂದು ಇಡಿ ದಾಳಿ (ED Raid) ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, ಇಡಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ಕೊಡೋದಾಗಿ ಹೇಳಿದ್ರು. ತಮ್ಮ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ಯಾವುದೇ ಅಕೌಂಟ್ಸ್ ಕೇಳಿದ್ರೂ ಕೊಡಿ ಅಂತ ಹೇಳಿದ್ದೇನೆ. ನಾನು ಏನೂ ಮುಚ್ಚಿಟ್ಟಿಲ್ಲ. ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ. ಏನೇ ಇದ್ರೂ ಕಾನೂನು ನನಗೂ ಒಂದೇ ಎಲ್ಲರಿಗೂ ಒಂದೇ. ತನಿಖೆಗೆ ಸಂಪೂರ್ಣ ಸಹಕಾರ ಕೊಡ್ತೇನೆ ಅಂತ ಪರಮೇಶ್ವರ್ ತಿಳಿಸಿದ್ರು.
ಇಡಿ ತನಿಖೆಗೆ ಸಹಕಾರ ಕೊಡುವ ಮತಾಡಿದ ಪರಮೇಶ್ವರ್, ರನ್ಯಾರಾವ್ ಗೋಲ್ಡ್ ಪ್ರಕರಣದ ಲಿಂಕ್ ಬಗ್ಗೆ ಪ್ರತಿಕ್ರಿಯೆ ಕೊಡಲಿಲ್ಲ. ನಾನು ಈ ಹಂತದಲ್ಲಿ ಏನನ್ನೂ ಮಾತಾಡಲ್ಲ. ಮಾಧ್ಯಮಗಳಲ್ಲಿ ಊಹೆ ಆಧಾರಿತ ಸುದ್ದಿಗಳು ಬರ್ತಿವೆ. ತನಿಖೆ ಬಳಿಕ ಮಾತಾಡ್ತೇನೆ ಅಂತ ಪರಮೇಶ್ವರ್ ಹೇಳಿದ್ರು. ಇನ್ನೂ ದಲಿತ ಅಂತ ಇಡಿ ದಾಳಿ ಆಗಿದೆ ಅಂತ ಅನ್ಸಲ್ಲ ಅಂದ ಪರಮೇಶ್ವರ್, ಸಿಎಂ ಹಾಗೂ ಸುರ್ಜೇವಾಲಾ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಅಂದ್ರು. ಮಾಜಿ ಶಾಸಕ ಶಫಿ ಅಹ್ಮದ್ ಅವರ ಕಾಲೇಜು ಮುಚ್ಚುವ ಸ್ಥಿತಿಗೆ ಬಂದ ಕಾರಣ ನಾವು ಖರೀದಿಸಿದ್ದೇವೆ. ನಾವೂ ಸಾಂಸ್ಥಿಕವಾಗಿ ಬೆಳೆಯಬಾರದೇ ಎಂದು ಹೊಸ ಆಸ್ತಿ ಖರೀದಿ ಬಗ್ಗೆ ಪರಮೇಶ್ವರ್ ಸ್ಪಷ್ಟನೆ ಕೊಟ್ರು. ಇದನ್ನೂ ಓದಿ: ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?
ಇನ್ನು ಬೆಳಗ್ಗೆಯಿಂದಲೂ ಬೆಂಗಳೂರಿನ ಪರಮೇಶ್ವರ್ ನಿವಾಸಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಭೇಟಿ ಕೊಟ್ಟಿದ್ದು ಗಮನ ಸೆಳೆಯಿತು. ಬೆಳಗ್ಗೆಯೇ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್, ಸೈಬರ್ ಸೆಕ್ಯುರಿಟಿ ಎಡಿಜಿಪಿ ಪ್ರಣವ್ ಮೊಹಂತಿ ಹಾಗೂ ನೂತನ ಪ್ರಭಾರಿ ಡಿಜಿಐಜಿಪಿ ಡಾ.ಎ.ಎಮ್ ಸಲೀಮ್, ಗೃಹ ಸಚಿವ ಪರಮೇಶ್ವರ್ ಭೇಟಿ ಮಾಡಿದ್ರು. ಬಳಿಕ ಕಾಂಗ್ರೆಸ್ ನಾಯಕರ ದಂಡೇ ಪರಮೇಶ್ವರ್ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ್ರು. ಡಿಸಿಎಂ ಡಿಕೆಶಿ, ಸಚಿವರಾದ ಚೆಲುವರಾಯಸ್ವಾಮಿ, ಹೆಚ್ ಸಿ ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್, ಮಾಜಿ ಸಂಸದ ಚಂದ್ರಪ್ಪ, ಶಾಸಕರಾದ ಎ.ಸಿ ಶ್ರೀನಿವಾಶ್, ಟಿ. ರಘುಮೂರ್ತಿ ಮುಂತಾದವರು ಪರಮೇಶ್ವರ್ ಭೇಟಿ ಮಾಡಿ ಧೈರ್ಯ ತುಂಬಿದ್ರು.
ಈ ವೇಳೆ ಮಾತಾಡಿದ ಡಿಸಿಎಂ ಡಿಕೆಶಿ, ಸಿದ್ದಾರ್ಥ ಚಾರಿಟೇಬಲ್ ಟ್ರಸ್ಟ್, ಒಂದು ಚಾರಿಟಿ ಸಂಸ್ಥೆಯಾಗಿದ್ದು, ಮದುವೆ, ಮುಂಜಿ, ಸ್ಕೂಲ್ ಫೀ, ಆಸ್ಪತ್ರೆ ಫೀ ಅಂತ ಸಣ್ಣಪುಟ್ಟ ಹಣದ ಸಹಾಯ ಮಾಡಿರಬಹುದು. ಆದ್ರೆ ಈ ದಾಳಿ ಹಾಗೂ ಸೋನಿಯಾ ಗಾಂಧಿ ವಿರುದ್ಧದ ದಾಳಿ ಖಂಡಿಸಿ ಇಡೀ ದೇಶದಲ್ಲಿ ಹೋರಾಟ ಮಾಡ್ತೇವೆ ಅಂದ್ರು. ಇನ್ನೂ ಸಚಿವ ಚೆಲುವರಾಯಸ್ವಾಮಿ ಮಾತಾಡಿ, ಹಿಂದೆ ಐಟಿ ದಾಳಿ, ಈಗ ಇಡಿ ದಾಳಿ. ಪದೇ ಪದೇ ದಾಳಿ ಆಗ್ತಿದ್ದು ಇದು ಪಕ್ಕಾ ರಾಜಕೀಯ ಹಾಗೂ ಸೇಡಿನ ದಾಳಿ ಅಂದ್ರು. ಬಿಕೆ ಹರಿಪ್ರಸಾದ್ ಮಾತಾಡಿ, ಪರಮೇಶ್ವರ್ ಎತ್ತರಕ್ಕೆ ಬೆಳೆದ ದಲಿತ ನಾಯಕ. ದಲಿತರ ಸ್ವಾಭಿಮಾನಕ್ಕೆ ಕೇಂದ್ರದ ಬಿಜೆಪಿ ಧಕ್ಕೆ ತಂದಿದೆ ಅಂತ ಲೇವಡಿ ಮಾಡಿದ್ರು.
ಸಚಿವ ಸಂಪುಟ ಸಭೆಗೂ ಮುನ್ನ ಗೃಹ ಸಚಿವ ಪರಮೇಶ್ವರ್ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ್ರು. ಇಡಿ ದಾಳಿ ಬಗ್ಗೆ ಸಿಎಂಗೆ ಪರಮೇಶ್ವರ್ ಮೌಖಿಕ ವಿವರಣೆ ಕೊಟ್ರು. ಈ ವೇಳೆ ಹಲವು ಸಚಿವರು ಇದ್ರು. ಇಡಿ ದಾಳಿ ಕುರಿತು ಸಿಎಂ ಕೆಲ ಹೊತ್ತು ತಮ್ಮ ನಿವಾಸದಲ್ಲೇ ಸಚಿವರ ಜತೆ ಸಮಾಲೋಚನೆ ನಡೆಸಿದ್ರು. ಇದನ್ನೂ ಓದಿ: ಚಿಕ್ಕಮಗಳೂರು ಏರ್-ಸ್ಟ್ರಿಪ್ ನಿರ್ಮಾಣ: ಭೂಸ್ವಾಧೀನಕ್ಕೆ ಬಾಕಿ ಇರುವ 17 ಕೋಟಿ ಬಿಡುಗಡೆಗೆ ಕ್ರಮ
ಸದ್ಯಕ್ಕೆ ಇಡಿ ದಾಳಿ ಪ್ರಕರಣ ಕಾಂಗ್ರೆಸ್ ಒಳಗೆ ಕಿಚ್ಚು ತುಂಬಿಸಿದೆ. ಕೇಂದ್ರದ ಬಿಜೆಪಿ ವಿರುದ್ಧ ದಲಿತ ಅಸ್ತ್ರ ಮೂಲಕ ಹೋರಾಟಕ್ಕೆ ಕೈಪಡೆ ಸಿದ್ಧತೆಗಿಳಿದಿದೆ. ಆದ್ರೆ ಅಲ್ಲೀವರೆಗೂ ಇಡಿ ತನಿಖೆ ಇನ್ನೂ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕು. ಇದನ್ನೂ ಓದಿ: ಸಿದ್ದರಾಮಯ್ಯ ನಾವೆಲ್ಲ ಒಂದೇ ಟೀಂನಲ್ಲಿ ಇದ್ದವರು, ಈಗ ಮರೆವು ಜಾಸ್ತಿಯಾಗಿದೆ: ಸೋಮಣ್ಣ