ಪೊಲೀಸ್ ವಶಕ್ಕೆ ಡಿ.ಕೆ ಶಿವಕುಮಾರ್

Public TV
2 Min Read
mumbai police copy

ಮುಂಬೈ: ಬೆಳಗ್ಗಿನಿಂದ ರಿನೈಸನ್ಸ್ ಹೊಟೇಲ್ ಮುಂದೆ ಅತೃಪ್ತರ ಭೇಟಿಗಾಗಿ ಕಾದು ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡಿಕೆ ಶಿವಕುಮಾರ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೋಟೆಲ್ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹ ಪ್ರತಿಭಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಸಮೀಪ 144 ಸೆಕ್ಷನ್ ಹಾಕಿ ನಿಷೇಧಾಜ್ಞೆ ವಿಧಿಸಿದ್ದರು. ಆದರೂ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಡಿಕೆಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತತ 6 ಗಂಟೆಗಳ ಕಾಲ ಹೋಟೆಲ್ ಮುಂಭಾಗ ಪ್ರತಿಭಟಿಸಿದ್ದ ಅವರನ್ನು ಪೊಲೀಸರು ತಮ್ಮ ವ್ಯಾನಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಡಿಕೆಶಿ ಜೊತೆ ಸಚಿವ ಜಿಟಿಡಿ, ಬಾಲಕೃಷ್ಣ ಹಾಗೂ ಶಿವಲಿಂಗೇ ಗೌಡ ಅವರನ್ನೂ ವಶಕ್ಕೆ ಪಡೆದಿದ್ದಾರೆ.

DK MUMBAI

ಬಿಜೆಪಿ ಮುಖಂಡರಿಬ್ಬರು ಮಂಗಳವಾರ ರಾತ್ರಿ ಅತೃಪ್ತ ಶಾಸಕರನ್ನು ಭೇಟಿಯಾದ ಬೆನ್ನಲ್ಲೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇ ಗೌಡ ಅವರು ಮುಂಬೈಗೆ ತೆರಳಿದ್ದರು. ಮುಂಬೈಗೆ ಬರುವ ಮಾಹಿತಿ ಬೆನ್ನಲ್ಲೇ ಅಲ್ಲಿನ ಪೊಲೀಸ್ ಅಲರ್ಟ್ ಆಗಿದ್ದು, ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ. ಹೀಗಾಗಿ ಹೋಟೆಲ್ ಬಳಿ ಬಂದರೂ ಡಿಕೆಶಿಗೆ ಒಳಗಡೆ ಹೋಗಲು ಸಾಧ್ಯವಾಗಿರಲಿಲ್ಲ.

dkshi 1

ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತುಕತೆ ನಡೆದಿತ್ತು. ನಾವು ಒಂದೇ ಕುಟುಂಬದವರು. ನಮ್ಮ ಮಧ್ಯೆ ಸ್ವಲ್ಪ ಸಮಸ್ಯೆ ಆಗಿದೆ. ಅದನ್ನು ನಾವು ಸರಿಪಡಿಸಲು ಬಂದಿದ್ದೇವೆಯೋ ಹೊರತು, ಬೆದರಿಕೆ ಹಾಕಲು ಬಂದಿಲ್ಲ. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಆದರೆ ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಸಚಿವರು ಮನವಿ ಮಾಡಿಕೊಂಡರೂ ಪೊಲೀಸರು ಸುತಾರಾಂ ಒಪ್ಪಿಲ್ಲ. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದರು. ಕೊನೆಗೆ ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದರು.

MUMBAI 1

ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರು ನಡುವೆ ಮಾತುಕತೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಹೋಟೆಲ್‍ನಲ್ಲಿ ರೂಮ್ ಕೊಡಲು ಒಪ್ಪಿಗೆ ನೀಡಲಾಗಿತ್ತು. ಆದರೆ ಅತೃಪ್ತ ಶಾಸಕರ ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ಡಿಕೆಶಿಗೆ ರೂಮ್ ಕೊಡಲು ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದರು.

MUMBAI 2

ನನಗೆ ಶಾಸಕರು ಇರುವ ಬಿಲ್ಡಿಂಗ್‍ನಲ್ಲೇ ರೂಮ್ ಬೇಕೇಬೇಕು ಎಂದು ಹೋಟೆಲ್ ಸಿಬ್ಬಂದಿ ಬಳಿ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದಾರೆ. ಪೊಲೀಸರು ಮತ್ತು ಸಿಬ್ಬಂದಿ ಡಿಕೆಶಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದರು. ಆದರೂ ಡಿಕೆಶಿ ತನ್ನ ಪಟ್ಟು ಬಿಡದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ಡಿಕೆಶಿ ಅವರ ಬೆಳಗ್ಗಿನ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಅತೃಪ್ತರು, ನಮಗೆ ಡಿಕೆಶಿ ಮೇಲೆ ಗೌರವವಿದೆ. ನಾವಿಂದು ಉನ್ನತ ಸ್ಥಾನಕ್ಕೇರಲು ಅವರೇ ಕಾರಣ. ಹೀಗಾಗಿ ಮುಂಬೈನಲ್ಲಿ ಅವರಿಗೆ ಅವಮಾನ ಆಗುವುದು ನಮಗೆ ಸರಿ ಅನ್ನಿಸುತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ನಾವು ಯಾರನ್ನೂ ಭೇಟಿ ಮಾಡಲ್ಲ ಎಂದು ಸ್ಪಷ್ಟ ಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *