ಬೆಂಗಳೂರು: ಆಧುನಿಕ ವೈದ್ಯಕೀಯದ ಜೊತೆಗೆ ಪಾರಂಪರಿಕ ವೈದ್ಯ ಪದ್ದತಿಯನ್ನ ನಾವು ಮುಖ್ಯವಾಹಿನಿಗೆ ತರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು.
ನಾಗಮಂಗಲ ಆದಿಚುಂಚನಗಿರಿ ಸಂಸ್ಥಾನದಲ್ಲಿ ಇಂದು (ಗುರುವಾರ) ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳೆಯುತ್ತಿರುವ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಬಹುತೇಕರು ನಾಟಿ ವೈದ್ಯ ಪದ್ದತಿಯನ್ನ ನಂಬಲ್ಲ. ಆದರೆ ಅಲೋಪತಿ ಬರುವ ಮುನ್ನ ನಮ್ಮ ರಾಜ ಮಹಾರಾಜರಿಗೆ ಚಿಕಿತ್ಸೆ ನೀಡಿ, ಕಾಯಿಲೆಗಳನ್ನ ವಾಸಿಮಾಡುತ್ತಿದ್ದುದು ನಮ್ಮ ಗಿಡಮೂಲಿಕೆಗಳ ಔಷಧಿಯ ನಾಟಿ ಪದ್ದತಿ ಎಂಬುದನ್ನ ಮರೆಯಬಾರದು ಎಂದರು. ಇದನ್ನೂ ಓದಿ: ಕಬ್ಬು ಬೆಳೆಯುವ ಉತ್ಸಾಹ – 20 ವರ್ಷಗಳಿಂದ ಮುಚ್ಚಿದ ಸಕ್ಕರೆ ಫ್ಯಾಕ್ಟರಿಯನ್ನು ತೆರೆಯಲು ಸರ್ಕಾರದ ಬೆನ್ನತ್ತಿದ ರೈತರು
ಗಿಡಮೂಲಿಕೆಗಳ ಚಿಕಿತ್ಸೆ, ಪಾರಂಪರಿಕ ವೈದ್ಯ ಪದ್ದತಿ ಮುಖ್ಯವಾಹಿನಿಗೆ ತರಬೇಕು. ಆದರೆ ತರಲಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ನಕಲಿ ವೈದ್ಯರ ಹಾವಳಿ. ನಕಲಿ ವೈದ್ಯರ ಹಾವಳಿಯಿಂದಾಗಿಯೇ ನಾಟಿ ವೈದ್ಯ ಪದ್ದತಿ ಮುಖ್ಯವಾಹಿನಿಗೆ ಬರದೇ ಮರೆಮಾಚಿ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಬಡಜನರಿಗೆ ಕಡಿಮೆ ಖರ್ಚಿನಲ್ಲಿ ಆರೋಗ್ಯ ಒದಗಿಸುವಲ್ಲಿ ಪಾರಂಪರಿಕ ವೈದ್ಯರ ಕೊಡುಗೆ ಖಂಡಿತವಾಗಿಯೂ ಇದೆ. ಇವತ್ತಿಗೂ ಅನೇಕರು ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದ ಚಿಕಿತ್ಸೆ ಹೇಳಿದಾಗ, ನಾಟಿ ಔಷಧಿಯ ಮೇಲೆ ನಂಬಿಕೆಯಿಟ್ಟು ಚಿಕಿತ್ಸೆ ಪಡೆಯುತ್ತಾರೆ. ಗಿಡಮೂಲಿಕೆ ಔಷಧಿ ಉಪಚಾರಗಳಿಂದ ಅತಿ ಕಡಿಮೆ ಖರ್ಚಿನಲ್ಲಿ ಬಡವರಿಗೆ ಆರೋಗ್ಯ ಸೇವೆ ಒದಗಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಪಾರಂಪರಿಕ ವೈದ್ಯ ಪದ್ದತಿ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ಇದನ್ನೂ ಓದಿ: ಮೊದ್ಲು ಕುಮಾರಸ್ವಾಮಿ ಪ್ರಮಾಣ ಮಾಡ್ಲಿ, ಆಮೇಲೆ ಮಾತಾಡ್ತೀನಿ: ದರ್ಶನಾಪುರ
ಸರ್ಕಾರಕ್ಕೆ ನಿಜವಾದ ನಾಟಿ ವೈದ್ಯರ ಮೇಲೆ ನಂಬಿಕೆಯಿದ್ದರೂ, ನಕಲಿ ವೈದ್ಯರಿಂದಾಗಿ ಈ ಪದ್ದತಿಯನ್ನ ಪ್ರೋತ್ಸಾಹಿಸಲು ಸಾಧ್ಯವಾಗುತ್ತಿಲ್ಲ. ನೈಜ ನಾಟಿ ವೈದ್ಯರನ್ನ ಗುರುತಿಸುವುದು ಒಂದು ಸವಾಲು. ಹೀಗಾಗಿ ಒಂದು ಫ್ರೆಮ್‌ವರ್ಕ್ ಮುಖ್ಯ. ನಿಯಮಾವಳಿಗಳೊಂದಿಗೆ ನಾಟಿ ವೈದ್ಯರನ್ನ ಗುರುತಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚರ್ಚಿಸಿ ತೀರ್ಮಾನಗಳನ್ನ ತೆಗೆದುಕೊಳ್ಳಲು ಮುಕ್ತ ಮನಸ್ಸು ಹೊಂದಿದೆ. ಈ ನಿಟ್ಟಿನಲ್ಲಿ ನಾಟಿ ವೈದ್ಯರ ಔಷಧಿ ವಿಧಾನಗಳು, ಗಿಡಮೂಲಿಕೆಗಳ ಬಗ್ಗೆ ವಿಸ್ತ್ರತವಾಗಿ ವರದಿಯೊಂದಿಗೆ ಮನವಿ ಸಲ್ಲಿಸುವಂತೆ ಪಾರಂಪರಿಕ ವೈದ್ಯರ ಪರಿಷತ್‌ಗೆ ಸಚಿವರು ಸೂಚನೆ ನೀಡಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಆರೋಗ್ಯ ಕ್ಷೇತ್ರದಲ್ಲಿ ಹಳೇ ಬೇರು ಹೊಸ ಚಿಗುರು ಎರಡು ಮುಖ್ಯ. ನಾಟಿ ವೈದ್ಯ ಪದ್ದತಿಯನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ. ಋಷಿಮುನಿಗಳಿಂದ ಪರಂಪರಾಗತವಾಗಿ ಬಂದಿರುವ ಭಾರತೀಯ ವೈದ್ಯ ಪದ್ದತಿಯನ್ನ ನಾವು ಉಳಿಸಿಕೊಂಡು ಹೋಗಬೇಕು. ಹಲವು ಗಿಡಮೂಲಿಕೆಗಳು ಅವಸಾನದ ಅಂಚಿನಲ್ಲಿವೆ. ಗಿಡಮೂಲಿಕೆ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿಜಕ್ಕೂ ಆಸಕ್ತಿ ತೋರಿಸಿ ಸಮ್ಮೇಳನಕ್ಕೆ ಬಂದಿದ್ದಾರೆ ಎಂದು ಶ್ರೀಗಳು ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನಕಲಿ ಹುಲಿ ಉಗುರು ಧರಿಸದಂತೆ ಈಶ್ವರ್ ಖಂಡ್ರೆ ಮನವಿ – ಸರ್ಕಾರಕ್ಕೆ ಮರಳಿಸಲು ಅವಕಾಶಕ್ಕೆ ಚಿಂತನೆ
ನಾಟಿ ವೈದ್ಯರ ಸಮ್ಮೇಳನದಲ್ಲಿ ಮೊದಲ ಬಾರಿಗೆ ಸರ್ಕಾರದ ಆರೋಗ್ಯ ಸಚಿವರು ಪಾಲ್ಗೊಂಡಿರುವುದು ನಿಜಕ್ಕೂ ಸಂತಸದ ಸಂಗತಿ. ಏನಾದರೂ ಒಂದು ಪರಿಹಾರ ಕಂಡುಕೊಳ್ಳಬೇಕು ಎಂಬ ದೃಷ್ಟಿಕೋನವನ್ನ ದಿನೇಶ್ ಗುಂಡೂರಾವ್ ಹೊಂದಿದ್ದಾರೆ. ಈ ಹಿಂದೆ ಆಯುಷ್ ಕಾಲೇಜುಗಳಲ್ಲಿ ಪ್ರವೇಶಾತಿ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಯಿತ್ತು. ಸಮಸ್ಯೆಯನ್ನ ಸಚಿವರ ಗಮನಕ್ಕೆ ತಂದ 10 ದಿನಗಳಲ್ಲಿ ಪರಿಹಾರವನ್ನ ಸಚಿವ ದಿನೇಶ್ ಗುಂಡೂರಾವ್ ನೀಡಿದರು. ಸಮಾಜಕ್ಕೆ ಒಳ್ಳೆಯದನ್ನ ಮಾಡಬೇಕು ಎಂಬುದನ್ನ ನಿಶ್ಚಯಿಸಿಕೊಂಡು ಗುಂಡೂರಾವ್ ಮುಂದೆ ಸಾಗುತ್ತಿದ್ದಾರೆ ಎಂದು ನಿರ್ಮಲಾನಂದನಾಥ ಶ್ರೀಗಳು ಆರೋಗ್ಯ ಸಚಿವರನ್ನು ಶ್ಲಾಘಿಸಿದರು.
Web Stories