ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಿ.ಟಿ ರವಿ, ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಪರವಾಗಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
ಪ್ರಚಾರದ ವೇಳೆ, ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಬೆಂಬಲಿಸಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಪಕ್ಷಾತೀತವಾಗಿ ಬಿಜೆಪಿ ಪಕ್ಷ ಸೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಅತಿ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸ್ವಾಭಿಮಾನದ ಅಲೆಯಿದ್ದು, ಮೆಡಿಕಲ್ ಕಾಲೇಜು ವಿಚಾರದಲ್ಲಿ ಡಿಕೆಶಿ ಸವಾಲು ಹಾಕಿದಾಗಲೇ ಜನರ ಸ್ವಾಭಿಮಾನ ರೊಚ್ಚಿಗೇಳುವಂತೆ ಮಾಡಿದೆ. ಹೀಗಾಗಿ ದೊಡ್ಡ ನಾಯಕರಾದ ಡಿಕೆಶಿ ದೊಡ್ಡದಾಗಿ ಯೋಚನೆ ಮಾಡಬೇಕು. ಅದು ಬಿಟ್ಟು ಸಣ್ಣತನ ಪ್ರದರ್ಶನ ಮಾಡಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ಒನ್ ಸೈಡ್ ಮ್ಯಾಚ್ ಎಂಬ ಪರಿಸ್ಥಿತಿ ಇದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಎರಡನೇ ಸ್ಥಾನಕ್ಕಾಗಿ ಪೈಪೋಟಿಗಿಳಿದಿವೆ ಎಂದರು.
ಅಲ್ಲದೆ ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯ ಪಂಚೆ ಶಲ್ಯದಷ್ಟು ಸರಳವಾಗಿಲ್ಲ. ಅವರ ಪಂಚೆ ಹಾಗೂ ಶಲ್ಯಕ್ಕೆ ಅವರ ಐಷಾರಾಮಿ ಜೀವನ ಮಿಸ್ ಮ್ಯಾಚ್ ಆಗುತ್ತಿದೆ. ಸಿದ್ದರಾಮಯ್ಯ ಪ್ರತಿ ದಿನ ಹಾಕುವ ಗಾಗಾಲ್ಸ್ ನ ಬೆಲೆ ಏನು? ಎಂದು ಪ್ರಶ್ನೆ ಮಾಡಿದರು.
ಯಡಿಯೂರಪ್ಪ ಅವರ ರಾಜೀನಾಮೆ ಕೇಳುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಒಂದು ಸೀಟು ಬಂದಾಗಲೇ ಸಿದ್ದರಾಮಯ್ಯ ನೈತಿಕತೆ ಇದ್ದಿದ್ರೆ ಅಂದೇ ರಾಜಕೀಯ ನಿವೃತ್ತಿ ಪಡೆಯಬೇಕಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯಷ್ಟು ದೊಡ್ಡ ಲೀಡರ್ ಅಲ್ಲ. ಈಗಲೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಕೆಲವರು ಕೃಪಾಕಟಾಕ್ಷದಿಂದ ನಾಯಕರಾದರೆ, ಕೆಲವರು ವಂಶಪಾರಂಪರ್ಯವಾಗಿ ನಾಯಕರಾಗಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ಗುದ್ದು ನೀಡಿದರು.