– ಕಾಂಗ್ರೆಸ್ ಹೈ ಕಮಾಂಡ್‍ಗೆ ಖಡಕ್ ಸಂದೇಶ ನೀಡಿದ ಜೆಡಿಎಸ್ ಸಚಿವ
ಮಂಡ್ಯ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಬೀದಿಯಲ್ಲಿ ನಿಂತು ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿದರೆ ಸುಮ್ಮನಿರಲು ಆಗುತ್ತಾ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಯಶವಂತಪುರ ಕ್ಷೇತ್ರದ ಶಾಸಕರಾಗಿರುವ ಎಸ್.ಟಿ.ಸೋಮಶೇಖರ್ ವಿರುದ್ಧ ಕಿಡಿಕಾರಿದ್ದಾರೆ.
ಮೇಲುಕೋಟೆ ಕಲ್ಯಾಣಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಸರ್ಕಾರ ಐದು ವರ್ಷ ಸುಲಲಿತವಾಗಿ ನಡೆಯಬೇಕು ಅಂದ್ರೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ತಮ್ಮ ನಾಯಕರಿಗೆ ಹಾಗೂ ಶಾಸಕರಿಗೆ ಸ್ಪಷ್ಟವಾಗಿ ಸೂಚನೆ ನೀಡಬೇಕು. ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಶಾಸಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಎಲ್ಲವನ್ನು ಸರಿ ಮಾಡದಿದ್ದರೆ ಮುಂದಾಗುವ ಅನಾಹುತಕ್ಕೆ ಕಾಂಗ್ರೆಸ್ ಹೊಣೆ ಹೊರಬೇಕಾಗುತ್ತದೆ. ಬಿಜೆಪಿ ಮಾಜಿ ಶಾಸಕ ಯೋಗೇಶ್ವರ್ ಅವರು ಕೆಲವು ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಅವರು ಕಳೆದ ಏಳು ತಿಂಗಳಿನಿಂದ ಪ್ರಯತ್ನಿಸುತ್ತಿದ್ದಾನೆ. ಆದರೆ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ ಅವರು ಮೇಲುಕೋಟೆ ಅಭಿವೃದ್ಧಿಯನ್ನು ಹೊತ್ತಿರೋದು ಸಂತಸದ ವಿಚಾರ. ಕಲ್ಯಾಣಿ ಅಕ್ಕಪಕ್ಕದ ವ್ಯಾಪಾರಸ್ಥರನ್ನು ಒಕ್ಕಲೆಬ್ಬೆಸುವುದಿಲ್ಲ. ಅಂಗಡಿ ತೆರವು ಮಾಡಿರುವ ವ್ಯಾಪಾರಸ್ಥರಿಗೆ ತಲಾ 10 ಸಾವಿರ ರೂ. ನೀಡಿ, ಪ್ರತ್ಯೇಕ ಅಂಗಡಿಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.
ಈ ಧಾರ್ಮಿಕ ಕ್ಷೇತ್ರ ಜನರ ಮನಸ್ಸಿನಲ್ಲಿರುವುದಕ್ಕೆ ಇನ್ಫೋಸಿಸ್ ಸಂಸ್ಥೆಯ ಅಭಿವೃದ್ಧಿ ಸಹಕಾರಿಯಾಗಿದೆ. ಹೀಗಾಗಿ ಈ ಬಾರಿ ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಸುಧಾಮೂರ್ತಿ ಅವರು ಚಾಲನೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv