ಸರ್ಕಾರಿ ಆಸ್ಪತ್ರೆ, ಶಾಲೆ, ಸಕಾಲ ಸೇವೆಗಳನ್ನು ಜನರಿಗೆ ತಲುಪಿಸಿ- ಕಾರ್ಯಕರ್ತರಿಗೆ ಅಶ್ವಥ್ ನಾರಾಯಣ್ ಸಲಹೆ

Public TV
3 Min Read
Ashwath Narayan 3

– ಜನರಿಗೆ ಸಹಾಯ ಹಸ್ತ ಚಾಚುವ ಜೊತೆಗೆ ತಳಮಟ್ಟದಿಂದ ಅಭಿಪ್ರಾಯ ಸಂಗ್ರಹ ಅಗತ್ಯ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳು, ಶಾಲೆಗಳು ಹಾಗೂ ಸಕಾಲದಂತಹ ಸೇವೆಗಳನ್ನು ಜನರಿಗೆ ವೈಯಕ್ತಿಕ ಮಟ್ಟದಲ್ಲಿ ಸಿಗುವಂತೆ ಮಾಡಲು ಬಿಜೆಪಿ ಕಾರ್ಯಕರ್ತರು ಗಮನ ಕೊಡಬೇಕು ಎಂದು ಉನ್ನತ ಶಿಕ್ಷಣ ಹಾಗೂ ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸಲಹೆ ನೀಡಿದರು.

ಬಿಜೆಪಿಯಿಂದ ಶನಿವಾರ ನಡೆದ ಬೆಂಗಳೂರು ಉತ್ತರ ಜಿಲ್ಲೆಯ ಸಂಘಟನಾತ್ಮಕ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಆಡಳಿತವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಬೆಂಗಳೂರು ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳ ಮತ್ತು ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಈ ಬಗ್ಗೆ ಜನರಿಗೆ ಇನ್ನೂ ಸರಿಯಾದ ಮಾಹಿತಿ ಇಲ್ಲವಾಗಿದೆ. ಈ ಕೊರತೆಯನ್ನು ಹೋಗಲಾಡಿಸುವುದು ಹಾಗೂ ಸೌಲಭ್ಯಗಳನ್ನು ಆದಷ್ಟು ಹೆಚ್ಚು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ರಾಜ್ಯದಲ್ಲಿಂದು 801 ಹೊಸ ಕೊರೊನಾ ಕೇಸ್- 1,142 ಡಿಸ್ಚಾರ್ಜ್, 15 ಸಾವು

ಜನರಿಗೆ ಸೇವೆಗಳನ್ನು ಸುಲಭವಾಗಿ ತಲುಪಿಸಲು ಡಿ.ವಿ.ಸದಾನಂದಗೌಡರು ತಮ್ಮ ಆಡಳಿತಾವಧಿಯಲ್ಲಿ ಸಕಾಲ ಸೇವೆಯನ್ನು ಪರಿಚಯಿಸಿದರು. ಆದರೆ ಇದನ್ನು ಬಳಸಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆ ಇದೆ. ಇಂದು ತಂತ್ರಜ್ಞಾನದಿಂದಾಗಿ ಜನರ ಬೆರಳ ತುದಿಗೆ ಆಡಳಿತದ ಸೇವೆಗಳನ್ನು ತಲುಪಿಸಬಹುದಾಗಿದೆ. ಇದಕ್ಕೆ ಪೂರಕವಾಗಿ ಕಾರ್ಯಕರ್ತರು ಜನರೊಂದಿಗೆ ಸಂಪರ್ಕದಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳ ಪ್ರಯೋಜನ ಪಡೆಯುವಂತೆ ಮಾಡಬೇಕು ಎಂದು ತಿಳಿಸಿದರು.

ಜನರು ಖಾತೆ ಮಾಡಿಸುವುದು ಸೇರಿದಂತೆ ಇತರೆ ಸರ್ಕಾರಿ ಕೆಲಸಗಳಿಗೆ ಬ್ರೋಕರ್ ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇಲ್ಲದಂತೆ ಮಾಡಬೇಕು. ಕಾರ್ಯಕರ್ತರು ನಾಯಕರ ಹಿಂದೆ ಓಡಾಡುವುದನ್ನು ಬಿಟ್ಟು ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು. ಎಲ್ಲಿ ಅಗತ್ಯವೋ ಅಂತಹ ಕಡೆಗಳಲ್ಲಿ ಇದ್ದು ಕೆಲಸಗಳನ್ನು ಮಾಡಬೇಕು ಎಂದರು. ಇದನ್ನೂ ಓದಿ: ರೈತರು, ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಅಧಿವೇಶನದಲ್ಲಿ ಒತ್ತಾಯ: ಸತೀಶ್ ಜಾರಕಿಹೊಳಿ

ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನ ಪಡಿತರ ಕಾರ್ಡ್ ನಿಂದ ವಂಚಿತರಾಗಿದ್ದು, ಕಾರ್ಯಕರ್ತರು ಅರ್ಹರಿಗೆ ಕಾರ್ಡ್ ಸಿಗುವಂತೆ ಮುತುವರ್ಜಿ ವಹಿಸಬೇಕು. ಅರ್ಹ ವಸತಿ ರಹಿತರು ಮುಖ್ಯಮಂತ್ರಿಗಳ ಗೃಹ ವಸತಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಹಾಕುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಕೊರೊನಾ ತಡೆಗಟ್ಟಲು ಸರ್ಕಾರ ಉಚಿತವಾಗಿ ನೀಡುತ್ತಿರುವ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ತಲುಪಿಸುವುದರ ಬಗ್ಗೆಯೂ ಕಾರ್ಯಕರ್ತರು ಒತ್ತು ಕೊಡಬೇಕು. ಅಲ್ಲದೆ ಸರ್ಕಾರದ ಕಾರ್ಯನಿರ್ವಹಣೆ ಬಗ್ಗೆ ವ್ಯವಸ್ಥಿತ ರೀತಿಯಲ್ಲಿ ಅಭಿಪ್ರಾಯ ಸಂಗ್ರಹದ ಕೆಲಸ ಆಗಬೇಕು. ನಾಯಕರ ಕಿವಿಯಲ್ಲಿ ಏನೋ ಹೇಳಿಬಿಟ್ಟರೆ ಅದು ಅಭಿಪ್ರಾಯ ತಿಳಿಸಿದಂತೆ ಆಗುವುದಿಲ್ಲ. ಬೂತ್ ಮಟ್ಟದಿಂದ ಶುರುವಾಗುವ ಅಭಿಪ್ರಾಯ ಸಂಗ್ರಹವನ್ನು ಆಡಳಿತ ನಡೆಸುವವರಿಗೆ ತಲುಪಿಸಲು ಕ್ರಮಬದ್ಧ ವ್ಯವಸ್ಥೆಯನ್ನು ಅನುಸರಿಸಬೇಕು ಎಂದು ಅಶ್ವಥ್ ನಾರಾಯಣ ತಿಳಿಸಿದರು.

ಜನರ ನಂಬಿಕೆಯೇ ಪಕ್ಷದ ಜೀವಾಳ. ಹಣ ಬಲವೊಂದೇ ನಾಯಕತ್ವದ ಮಾನದಂಡ ಆಗಲಾರದು. ಹೊಟ್ಟೆಪಾಡಿಗಾಗಿ ರಾಜಕೀಯ ಮಾಡುವ ಪರಿಸ್ಥಿತಿ ಬರಬಾರದು. ಬದಲಿಗೆ ಉತ್ತಮ ನಾಯಕತ್ವ ಕೊಡುವುದಕ್ಕಾಗಿ ರಾಜಕೀಯ ಕ್ಷೇತ್ರವು ವೇದಿಕೆಯಾಗಬೇಕು. ಈ ಬಗ್ಗೆ ರಾಜಕೀಯ ಮುಖಂಡರಲ್ಲಿ ಮತ್ತು ಕಾರ್ಯಕರ್ತರಲ್ಲಿ ಸ್ಪಷ್ಟತೆ ಇರಬೇಕು ಎಂದರು.

ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಅಬಕಾರಿ ಸಚಿವ ಗೋಪಾಲಯ್ಯ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಗೋಪಿನಾಥ್ ರೆಡ್ಡಿ, ರಾಜಣ್ಣ, ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಮಾಜಿ ಶಾಸಕ ಮುನಿರಾಜು, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ಹಾಗೂ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *