ಬೆಳಗಾವಿ(ಚಿಕ್ಕೋಡಿ): ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಒಂದು ಜಿಲ್ಲೆಯ ನಿಪ್ಪಾಣಿ ಹೊರವಲಯದ ತವದಿ ಘಾಟ್‍ನಲ್ಲಿ ಪಲ್ಟಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಹಾಲು ರಸ್ತೆಯಲ್ಲಿಯೇ ಹೊಳೆಯಂತೆ ಹರಿದು ಪೋಲಾಗಿದೆ.
ಬೆಳಗಾವಿಯಿಂದ ಮುಂಬೈಗೆ ಟ್ಯಾಂಕರ್ ನಲ್ಲಿ ಹಾಲನ್ನು ಸಾಗಿಸಲಾಗುತ್ತಿತ್ತು. ತವದಿ ಘಾಟ್‍ನಲ್ಲಿ ಟ್ಯಾಂಕರ್ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಹಾಲು ಟ್ಯಾಂಕರ್ ನಿಂದ ಸೋರಿ, ರಸ್ತೆಯಲ್ಲಿ ಹೊಳೆಯಂತೆ ಹರಿದು ಹೋಗುತ್ತಿದೆ. ಸದ್ಯ ಅಪಘಾತದಲ್ಲಿ ಗಾಯಗೊಂಡಿರುವ ಚಾಲಕನನ್ನು ಸ್ಥಳೀಯರು ಆಸ್ಪತ್ರಗೆ ದಾಖಲಿಸಿದ್ದಾರೆ.
ಬರೋಬ್ಬರಿ 16 ಸಾವಿರ ಲೀಟರ್ ಹಾಲನ್ನು ಹೊತ್ತೊಯ್ಯುವ ಸಾಮರ್ಥ್ಯದ ಟ್ಯಾಂಕರ್ ಇದಾಗಿದ್ದು, ಈ ಬೃಹತ್ ಟ್ಯಾಂಕರ್ ರಸ್ತೆಯಲ್ಲಿ ಪಲ್ಟಿಯಾಗಿರುವುದಕ್ಕೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.