ಬೀದರ್: ಭೀಕರ ಬರಗಾಲದಿಂದ ಬೆಂದು ಹೋಗಿರುವ ಬಿಸಿಲುನಾಡು ಬೀದರ್ ನಲ್ಲಿ ಪ್ರಕೃತಿ ವಿಸ್ಮಯ ತೊರಿಸಿದೆ. ಬೇವಿನ ಮರದಿಂದ ಹಾಲು ನಿರಂತರವಾಗಿ ಹರಿಯುತ್ತಿದ್ದು ಸ್ಥಳೀಯರು ಇದು ದೈವಲೀಲೆ ಎಂದು ದೇವಾರಾಧನೆ ಮಾಡುತ್ತಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ ಹೊಲವೊಂದರ ಬೇವಿನ ಮರದಿಂದ ಕಳೆದ ಒಂದು ವಾರದಿಂದ ಬಿಳಿ ಬಣ್ಣದ ಹಾಲಿನ ರೂಪದ ದ್ರವ ನಿರಂತರವಾಗಿ ಹೊರ ಹರಿಯುತ್ತಿದೆ. ಇದನ್ನು ಕಂಡ ಸ್ಥಳೀಯರು ದೈವಲೀಲೆ ಎಂದು ಭಕ್ತಿಯಿಂದ ಮರಕ್ಕೆ ಪೂಜೆ ಪುನಸ್ಕಾರ ಮಾಡಿ ಆರಾಧನೆ ಮಾಡುತ್ತಿದ್ದಾರೆ.
Advertisement
Advertisement
ನಿರಂತರವಾಗಿ ಹಾಲಿನ ಮಾದರಿಯ ದ್ರವ ಹೊರ ಸೂಸುವ ಮರದ ಈ ನೋಟ ನೋಡಲು ಸುತ್ತ ಮುತ್ತಲಿನ ಗ್ರಾಮಗಳ ಜನರು ತಂಡೊಪತಂಡವಾಗಿ ಮದಕಟ್ಟಿ ಗ್ರಾಮಕ್ಕೆ ಬರುತ್ತಿದ್ದಾರೆ. ಮರದಿಂದ ಬರುತ್ತಿರುವ ಹಾಲು ಸಿಹಿಯಾಗಿದ್ದು, ಜನರು ಅದನ್ನು ಕುಡಿದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಮರದಿಂದ ದ್ರವ ಹೊರ ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Advertisement
ಈ ಬಗ್ಗೆ ವಿಜ್ಞಾನಿಗಳು ಹೇಳೋದು ಏನು?
ಸಾಮಾನ್ಯವಾಗಿ ಎಲ್ಲ ಮರಗಳ ಬೇರು ಕೆಳಗಿನಿಂದ ಮೇಲಕ್ಕೆ ನೀರು ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಲ್ಲಿ ಕೋಶಗಳಿದ್ದು, ಮರದ ಎಲ್ಲ ಕೊಂಬೆಗಳಿಗೆ ನೀರನ್ನು ರವಾನಿಸುತ್ತದೆ. ನೀರು ಪೂರೈಸುವ ಕೋಶಗಳು ನಾಶವಾದಾಗ ಈ ರೀತಿಯ ಘಟನೆಗಳು ನಡೆಯುತ್ತದೆ. ಕೋಶಗಳು ತನ್ನ ಕೆಲಸವನ್ನು ಕಡಿಮೆ ಮಾಡಿದಾಗ ಮರದೊಳಗೆ ಇರುವ ನೀರು ಹೊರಬರುತ್ತದೆ. ಮರದಲ್ಲಿ ಸಹಜವಾಗಿ ನೊರೆ ಇರುವುದರಿಂದ ನೊರೆ ಮಿಶ್ರಿತ ನೀರು ಹಾಲಾಗಿ ಕಾಣುತ್ತದೆ. ಕೋಶಗಳು ನಾಶವಾದರೆ ನೀರು ಮೇಲಕ್ಕೆ ಬಂದು ಹಾಲಿನಂತೆ ಸುರಿಯಲು ಶುರುವಾಗುತ್ತದೆ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರಿವುದರಿಂದ ಹಾಲಿನಂತಿರುವ ನೀರು ಸಿಹಿ ಅನುಭವ ನೀಡುತ್ತದೆ.