ಮಲಗಿದ್ದಾಗಲೂ ಮೈಕ್ರೋಫೋನ್ ಆನ್! – ವಾಟ್ಸಪ್‌ನ ನಂಬಬೇಡಿ ಎಂದ ಮಸ್ಕ್

Public TV
2 Min Read
Elon Musk WhatsApp

ವಾಷಿಂಗ್ಟನ್: ಟ್ವಿಟ್ಟರ್‌ನಲ್ಲಿ (Twitter) ಹೊಸ ಹೊಸ ಫೀಚರ್‌ಗಳನ್ನು ತರುವಲ್ಲಿ ಗಮನಹರಿಸುತ್ತಿರುವ ಸಿಇಒ ಎಲೋನ್ ಮಸ್ಕ್ (Elon Musk) ಮೆಸೆಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ (WhatsApp) ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ವಾಟ್ಸಪ್ ಅನ್ನು ನಂಬಬೇಡಿ ಎಂಬ ಎಚ್ಚರಿಕೆಯನ್ನು ಬಳಕೆದಾರರಿಗೆ ನೀಡಿದ್ದಾರೆ.

ವಾಟ್ಸಪ್ ಅನ್ನು ಸಕ್ರಿಯವಾಗಿ ಬಳಸಲಾಗುತ್ತಿಲ್ಲವಾದರೂ ತಾವು ಮಲಗಿದ್ದಾಗ ಬ್ಯಾಕ್‌ಗ್ರೌಂಡ್‌ನಲ್ಲಿ ಮೈಕ್ರೋಫೋನ್ ಕಾರ್ಯನಿರ್ವಹಿಸುತ್ತಿರುತ್ತದೆ ಎಂದು ಟ್ವಿಟ್ಟರ್‌ನ ಎಂಜಿನಿಯರ್ ಒಬ್ಬರು ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ವಾಟ್ಸಪ್ ಅನ್ನು ನಂಬೋದು ಅಸಾಧ್ಯ ಎಂದಿದ್ದಾರೆ.

ಟ್ವಿಟ್ಟರ್‌ನ ಎಂಜಿನಿಯರ್ ಫೋಡ್ ಡಬೀರ್ ತನ್ನ ವಾಟ್ಸಪ್ ಅಪ್ಲಿಕೇಶನ್ ಅನ್ನು ಸಕ್ರಿಯವಾಗಿ ಬಳಕೆ ಮಾಡದೇ ಇರುತ್ತಿರುವಾಗಲೂ, ತಾವು ಮಲಗಿದ್ದ ಸಮಯದಲ್ಲೂ ನಿರಂತರವಾಗಿ ಮೈಕ್ರೋಫೋನ್ ಬ್ಯಾಕ್‌ಗ್ರೌಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ ಎಂದು ಆಘಾತಕಾರಿ ವಿಷಯವನ್ನು ತಿಳಿಸಿದ್ದಾರೆ. ಜೊತೆಗೆ ಇದಕ್ಕೆ ಸಂಬಂಧಪಟ್ಟಿರುವ ಸ್ಕ್ರೀನ್‌ಶಾಟ್ ಅನ್ನು ಕೂಡಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಎಲೋನ್ ಮಸ್ಕ್, ಯಾವುದನ್ನೂ ನಂಬಬೇಡಿ ಎಂದು ಪರೋಕ್ಷವಾಗಿ ವಾಟ್ಸಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಎಲೋನ್ ಮಸ್ಕ್ ವಾಟ್ಸಪ್ ಅನ್ನು ನಂಬಬೇಡಿ ಎಂದು ಹೇಳಿದ ಬಳಿಕ ಈ ಆರೋಪವನ್ನು ತಳ್ಳಿ ಹಾಕಿರುವ ವಾಟ್ಸಪ್, ಬಳಕೆದಾರರು ತಮ್ಮ ಮೈಕ್ ಸೆಟ್ಟಿಂಗ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದಾರೆ. ಒಮ್ಮೆ ಬಳಕೆದಾರರು ಅನುಮತಿ ನೀಡಿದರೆ, ಕರೆ ಮಾಡುವಾಗ, ಧ್ವನಿಯ ಸಂದೇಶ ಅಥವಾ ವೀಡಿಯೋ ರೆಕಾರ್ಡ್ ಮಾಡುವಾಗ ಮಾತ್ರವೇ ವಾಟ್ಸಪ್ ಮೈಕ್‌ಗೆ ಪ್ರವೇಶ ಪಡೆದುಕೊಳ್ಳುತ್ತದೆ. ಆದರೂ ಈ ಎಲ್ಲಾ ಸಂವಹನವನ್ನು ‘ಎಂಡ್ ಟು ಎಂಡ್ ಎನ್‌ಕ್ರಿಪ್ಶನ್’ನಿಂದ ರಕ್ಷಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

Elon Musk twitter 2

ನಾವು ಕಳೆದ 24 ಗಂಟೆಗಳಿಂದ ಟ್ವಿಟ್ಟರ್‌ನ ಎಂಜಿನಿಯರ್‌ನೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ತಮ್ಮ ಪಿಕ್ಸೆಲ್ ಫೋನ್ ಹಾಗೂ ವಾಟ್ಸಪ್‌ನೊಂದಿಗೆ ಸಮಸ್ಯೆ ಇರುವುದಾಗಿ ಪೋಸ್ಟ್ ಮಾಡಿದ್ದಾರೆ. ಇದು ಆಂಡ್ರಾಯ್ಡ್‌ನ ದೋಷವಾಗಿದ್ದು, ಇದರ ತನಿಖೆ ಹಾಗೂ ಪರಿಹಾರಕ್ಕೆ ಗೂಗಲ್ ಅನ್ನು ಕೇಳಿಕೊಂಡಿದ್ದೇವೆ ಎಂದು ವಾಟ್ಸಪ್ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರು ಬಳಿ ಭಾರೀ ಮೊತ್ತಕ್ಕೆ ಜಾಗ ಖರೀದಿಸಿದ ಆಪಲ್‌ ಐಫೋನ್‌ ತಯಾರಕ ಫಾಕ್ಸ್‌ಕಾನ್‌

ಆದರೂ ಹಲವಾರು ವಾಟ್ಸಪ್ ಬಳಕೆದಾರರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ದೂರಿದ್ದಾರೆ. ಈ ಹಿಂದೆ ವಾಟ್ಸಪ್ ಗೌಪ್ಯತೆಯ ಸಮಸ್ಯೆಗಳನ್ನು ಎದುರಿಸಿದೆ. ಫೋನ್ ಸಂಖ್ಯೆ, ಸಾಧನದ ಮಾಹಿತಿ, ಸ್ಥಳ, ಸಂಪರ್ಕಗಳಂತಹ ಕೆಲವು ಬಳಕೆದಾರರ ಡೇಟಾವನ್ನು ಅದರ ಮಾತೃ ಕಂಪನಿ ಮೆಟಾದೊಂದಿಗೆ ಹಂಚಿಕೊಂಡಿರುವುದಾಗಿ ವರದಿಯಾಗಿದೆ.

ಇತ್ತ ಎಲೋನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಧ್ವನಿ, ವೀಡಿಯೋ ಕಾಲ್ ಒಳಗೊಂಡಂತೆ ವಾಟ್ಸಪ್‌ನಂತಹುದೇ ಕೆಲ ಫೀಚರ್‌ಗಳನ್ನು ತರಲು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

Share This Article