ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಘೋಷಣೆ ಆಗುತ್ತಿದ್ದಂತೆ ಮೇಯರ್ ಹಾಗೂ ಉಪ ಮೇಯರ್ ಮೀಸಲಾತಿ ಸಹ ಘೋಷಣೆಯಾಗಿದೆ. ಮೇಯರ್ ಸ್ಥಾನಕ್ಕೆ 12 ಮಂದಿ ಅರ್ಹರಾದ್ರೆ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಸದಸ್ಯರೇ ಇಲ್ಲದಂತಾಗಿದೆ.
ಈ ಬಾರಿ ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಎ’ ಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಇದೀಗ ಬಂದಿರುವ ಚುನಾವಣೆಯ ಫಲಿತಾಂಶ ಗಮನಿಸಿದಾಗ ಬಿಜೆಪಿಯೇ ಅಧಿಕಾರದ ಗದ್ದುಗೆ ಏರುತ್ತಿದ್ದು, ಬಿಜೆಪಿ ಸದಸ್ಯರುಗಳೇ ಮೇಯರ್ ಹಾಗೂ ಉಪ ಮೇಯರ್ ಆಗುವ ಎಲ್ಲ ಸಾಧ್ಯತೆಗಳಿವೆ. ಆದರೆ, ಬಿಜೆಪಿಯಲ್ಲಿಯೇ ಯಾರು ಮೇಯರ್ ಆಗಬಹುದು, ಇನ್ಯಾರು ಉಪ ಮೇಯರ್ ಆಗಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
Advertisement
Advertisement
ಮೇಯರ್ ಸ್ಥಾನಕ್ಕೆ 22 ಸದಸ್ಯರು ಅರ್ಹರು:
ಪಾಲಿಕೆ ವಿಜೇತರ ಪಟ್ಟಿ ಗಮನಿಸಿದಾಗ ಒಟ್ಟು 82 ವಾರ್ಡ್‍ಗಳಲ್ಲಿ ಬರೋಬ್ಬರಿ 22 ಜನ ಹಿಂದುಳಿದ ಅ ವರ್ಗಕ್ಕೆ ಸೇರಿದವರು. ಆದರೆ 22ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲವು ಸಾಧಿಸಿದ 10 ಜನರು, ಇಬ್ಬರು ಎಐಎಂಐಎಂ ಸದಸ್ಯರಿದ್ದಾರೆ. ಇನ್ನುಳಿದ 12 ಜನ ಸದಸ್ಯರು ಬಿಜೆಪಿಯಿಂದ ಗೆಲವು ಸಾಧಿಸಿದ್ದು, ಇವರಲ್ಲಿ ಒಬ್ಬರು ಮೇಯರ್ ಆಗಲಿದ್ದಾರೆ. 1ನೇ ವಾರ್ಡ್ ಅನಿತಾ ಚಳಗೇರಿ, ವಾರ್ಡ್ 3ರ ಈರೇಶ ಅಂಚಟಗೇರಿ, 10ನೇ ವಾರ್ಡ್ ಚಂದ್ರಕಲಾ ಕೊಟಬಾಗಿ, 13ನೇ ವಾರ್ಡಿನ ಸುರೇಶ ಬೇದರೆ, 27ನೇ ವಾರ್ಡಿನ ಸವಿತಾ ಮದವಾಳಕರ, 30ನೇ ವಾರ್ಡಿನ ರಾಮಪ್ಪ ಬಡಿಗೇರ, 32ರ ಸತೀಶ ಹಾನಗಲ್, 38ರ ತಿಪ್ಪಣ್ಣ ಮಜ್ಜಗಿ, 49ರ ವೀಣಾ ಭರದ್ವಾಡ, 72ರ ಸವಿತಾ ಗುಂಜಾಳ ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಈ ಬಾರಿ ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಬಂದಿರುವುದು ಹಾಗೂ ಇವರೆಲ್ಲರೂ ಮೊದಲ ಬಾರಿ ಗೆಲುವು ಸಾಧಿಸಿದ್ದರಿಂದ ಮೇಯರ್ ಸ್ಥಾನ ಪುರುಷರಿಗೆ ನೀಡುವುದು ಖಚಿತ ಎನ್ನಲಾಗುತ್ತಿದೆ.
Advertisement
ತಿಪ್ಪಣ್ಣ ಮಜ್ಜಗಿ – ಅಂಚಟಗೇರಿ – ಬಡಿಗೇರ ಮಧ್ಯೆ ಬಿಗ್ ಫೈಟ್:
ಮೇಯರ್ ಸ್ಥಾನಕ್ಕೆ ಈಗ ತಿಪ್ಪಣ್ಣ ಮಜ್ಜಗಿ, ಈರೇಶ ಅಂಚಟಗೇರಿ, ಸುರೇಶ ಬೇದರೆ, ರಾಮಪ್ಪ ಬಡಿಗೇರ ಮಧ್ಯೆ ಪೈಪೋಟಿ ಶುರುವಾಗಿದೆ. ಅಲ್ಲದೇ ಈರೇಶ ಅಂಟಗೇರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಶಿಷ್ಯ. ಈಗಾಗಲೇ ಒಂದು ಬಾರಿ ಸದಸ್ಯರಾಗಿ ಅನುಭವ ಹೊಂದಿರುವವರು. ಆರ್‌ಎಸ್‌ಎಸ್ ಮೂಲವೂ ಇದೆ. ಸದ್ಯ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರೂ ಇದ್ದಾರೆ. ಆದ್ದರಿಂದ ಅಂಚಟಗೇರಿ ಅವರಿಗೆ ಮೇಯರ್ ಸ್ಥಾನ ಒಲಿಯುವ ಎಲ್ಲ ಲಕ್ಷಣಗಳಿವೆ. ಇದನ್ನೂ ಓದಿ: ಬಿಎಸ್‍ಪಿ ಪಕ್ಷದ ವಿಪ್ ಉಲ್ಲಂಘನೆ – 7 ಮಂದಿ ನಗರಸಭಾ ಸದಸ್ಯರನ್ನು ಅನರ್ಹಗೊಳಿಸಿ ಡಿಸಿ ಆದೇಶ
Advertisement
ಸುರೇಶ್ ಬೇದರೆ ಮೊದಲ ಬಾರಿ ಆಯ್ಕೆಯಾಗಿರುವ ಕಾರಣ ಪಕ್ಷದ ಮುಖಂಡರ ತೀರ್ಮಾನಕ್ಕಾಗಿ ಕಾಯಬೇಕು. ಇನ್ನು ತಿಪ್ಪಣ್ಣ ಮಜ್ಜಗಿ ಅವರು ಎರಡನೇ ಬಾರಿ ಆಯ್ಕೆಯಾದವರು. ಇವರ ಪತ್ನಿ ಅಶ್ವಿನಿ ಮಜ್ಜಗಿ ಕಳೆದ ಬಾರಿಯ ಮೇಯರ್ ಆದವರು. ಅಶ್ವಿನಿ ಮಜ್ಜಗಿ ಅವರ ತಾಯಿಯೂ ಈ ಹಿಂದೆ ಪಾಲಿಕೆ ಉಪಮೇಯರ್ ಆಗಿದ್ದರು. ಅಲ್ಲದೇ ತಿಪ್ಪಣ್ಣ ಮಜ್ಜಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್‍ರಿಗೆ ಪರಮಾಪ್ತ ಹಾಗೂ ಪಕ್ಷದ ಕಟ್ಟಾಳಾಗಿ ಪಕ್ಷಕ್ಕೆ ದುಡಿದ ಪರಿಣಾಮ ತಿಪ್ಪಣ್ಣ ಮಜ್ಜಗಿ ಹೆಸರು ಸಹ ಪ್ರಮುಖವಾಗಿ ಕೇಳಿ ಬರುತ್ತಿದೆ.
ನಾಲ್ಕನೇ ಬಾರಿ ಸದಸ್ಯರಾಗಿರುವ ರಾಮಪ್ಪ ಬಡಿಗೇರ ಸಹ ಹಿರಿತನ ಮೇಲೆ ಹಕ್ಕು ಮಂಡಿಸುವ ಸಾಧ್ಯತೆ ಇದೆ. ಅಲ್ಲದೇ ಮತ್ತೊಬ್ಬ ಹಿರಿಯ ಸದಸ್ಯ ಸತೀಶ್ ಹಾನಗಲ್ ಸಹ ಅರ್ಹರಿದ್ದು ಮೇಯರ್ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಇದನ್ನೂ ಓದಿ: ಒಗ್ಗಟ್ಟು ಇಲ್ಲದೆ 3 ಪಾಲಿಕೆಯಲ್ಲಿ ಸೋಲು – ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‍ಗೆ ಡಿಕೆಶಿ ಚಾರ್ಜ್‍ಶೀಟ್
ಧಾರವಾಡ ನಗರಕ್ಕೆ ಪಾಲಿಕೆಯಲ್ಲಿ ಮಲತಾಯಿ ಧೋರಣೆ ಸಲ್ಲಿಸಲಾಗುತ್ತಿದೆ ಎಂಬ ಆರೋಪವಿದ್ದು, ಪ್ರತ್ಯೇಕ ಪಾಲಿಕೆಗೆ ಹೋರಾಟಗಳು ಸಹ ನಡೆದಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮೇಯರ್ ಸ್ಥಾನವನ್ನು ಧಾರವಾಡಕ್ಕೆ ನೀಡುವ ಸಾಧ್ಯತೆಗಳು ಸಹ ಹೆಚ್ಚಾಗಿವೆ.
ಬಿಜೆಪಿ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿ ಉಪಮೇಯರ್:
ರಾಜ್ಯ ಸರ್ಕಾರ ಪಾಲಿಕೆಯ ಉಪ ಮೇಯರ್ ಸ್ಥಾನವನ್ನು ಪರಿಶಿಷ್ಟ ವರ್ಗ ಮಹಿಳೆಗೆ ನೀಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಾಲ್ವರು ಸದಸ್ಯರಿದ್ದಾರೆ. ಆದರೆ, ನಾಲ್ವರಲ್ಲಿ ಯಾರೂ ಬಿಜೆಪಿ ಸದಸ್ಯರಿಲ್ಲ. ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳಿದ್ದು, ಅವರನ್ನು ಕೈ ಬಿಟ್ಟರೆ ಇನ್ನಿಬ್ಬರು ಪಕ್ಷೇತರರು ಇದ್ದಾರೆ. 56ನೇ ವಾರ್ಡ್‍ನಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಂದ್ರಕಾ ಮೇಸ್ತ್ರಿ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ 69ನೇ ವಾರ್ಡ್‍ನ ದುರ್ಗಮ್ಮ ಶಶಿಕಾಂತ ಬಿಜವಾಡ ಇದ್ದಾರೆ. ಈ ಹಿಂದಿನ ಅವಧಿಯಲ್ಲಿ ದುರ್ಗಮ್ಮ ಬಿಜವಾಡ ಅವರ ಸಂಬಂಧಿ ಲಕ್ಷ್ಮೀ ಬಿಜವಾಡ ಉಪ ಮೇಯರ್ ಸ್ಥಾನ ಅಲಂಕರಿಸಿದ್ದರು. ಇದೀಗ ಚಂದ್ರಿಕಾ ಮೇಸ್ತ್ರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು, ಬಿಜೆಪಿಯ ಬಂಡಾಯ ಅಭ್ಯರ್ಥಿ ದುರ್ಗಮ್ಮ ಬಿಜವಾಡ ಒಬ್ಬರೇ ಉಪ ಮೇಯರ್ ಸ್ಥಾನಕ್ಕೆ ಅರ್ಹರಾಗಿದ್ದು. ಇವರನ್ನು ಬಿಜೆಪಿಗೆ ಕರೆತಂದು ಉಪಮೇಯರ್ ಸ್ಥಾನ ನೀಡುವ ಸಾಧ್ಯತೆಗಳು ದಟ್ಟವಾಗಿದೆ. ಇದನ್ನೂ ಓದಿ: ಇಂದು ದೆಹಲಿಗೆ ಸಿಎಂ ಬೊಮ್ಮಾಯಿ – 4 ಸಚಿವ ಸ್ಥಾನ ಭರ್ತಿ ಬಗ್ಗೆ ನಡೆಯುತ್ತಾ ‘ಹೈ’ಚರ್ಚೆ?
ಈ ಮಧ್ಯೆ ಮೇಯರ್ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನೆ ಆಯ್ಕೆ ಮಾಡುವ ವಿಚಾರವಾಗಿ ಶಾಸಕರಾದ ಜಗದೀಶ್ ಶೆಟ್ಟರ್. ಅರವಿಂದ ಬೆಲ್ಲದ್ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಸಿಎಂ ಸ್ಥಾನವೂ ಸಿಗದೇ. ಸಚಿವ ಸ್ಥಾನದಿಂದ ವಂಚಿತರಾದ ಅರವಿಂದ ಬೆಲ್ಲದ್ ಮೇಯರ್ ಸ್ಥಾನಕ್ಕೆ ತಮ್ಮ ಆಪ್ತರನ್ನ ಸೂಚಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನೂ ಬೆಲ್ಲದ್ ವಿರುದ್ಧ ಮುನಿಸಿಕೊಂಡಿರುವ ಶಾಸಕ ಶೆಟ್ಟರ್ ತಮ್ಮ ಪರಮಾಪ್ತ ಶಿಷ್ಯ ತಿಪ್ಪಣ್ಣ ಮಜ್ಜಗಿಗೆ ಮೇಯರ್ ಸ್ಥಾನ ಕೊಡಿಸಲು ಈಗಾಗಲೇ ತೆರೆಮರೆ ಕಸರತ್ತು ನಡೆಸಿದ್ದು. ಈ ಮೂಲಕ ಬೆಲ್ಲದಗೆ ಮತ್ತೊಮ್ಮೆ ಟಕ್ಕರ್ ಕೊಡಲು ಸಿದ್ದರಾಗಿದ್ದಾರೆ ಅನ್ನೋ ಸುದ್ದಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ. ಆದ್ರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ. ಸಿಎಂ ಬಸವರಾಜ ಬೊಮ್ಮಾಯಿ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವುದು ಮಾತ್ರ ಇದೀಗ ಬಿಜೆಪಿಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದಂತೂ ಸುಳ್ಳಲ್ಲ.