ಬೆಂಗಳೂರು: ಬೆಂಗಳೂರು ಅಭಿವೃದ್ಧಿಗೆ ಮೆಟ್ರೋ ಅತ್ಯಗತ್ಯ. ಆದರೆ ಇದೇ ಮೆಟ್ರೋ ಕಾಮಗಾರಿ (Metro Work) ಈಗ ಜನರ ಪಾಲಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಕೆ.ಆರ್.ಪುರಂನಿಂದ ಹೆಬ್ಬಾಳ, ಏರ್ಪೋರ್ಟ್ ರಸ್ತೆವರೆಗಿನ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಇಳಿದ ಸಚಿವ ಕೃಷ್ಣಬೈರೇಗೌಡರಿಗೆ (Krishna Byre Gowda) ಕಂಡಿದ್ದು ಅಸಮರ್ಪಕ ಕಾಮಗಾರಿ ನಿರ್ವಹಣೆ. ಮಾನ್ಯತಾ ಟೆಕ್ ಪಾರ್ಕ್ ಮುಂಭಾಗದಲ್ಲಿ ಕಾಮಗಾರಿ ನಡೆಯುತ್ತಿರುವ ವೇಗ ಕಂಡು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಮುಗಿಸೋದು ಯಾವಾಗ ಅಂತ ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾರೆ.
ವರ್ಷಗಳು ಕಳೆದರೂ ಕಾಮಗಾರಿ ವೇಗ ಪಡೆದುಕೊಳ್ಳದಿದ್ದರೆ ಜನರ ಸಂಕಷ್ಟಕ್ಕೆ ಕೊನೆ ಯಾವಾಗ ಅನ್ನೋ ಪ್ರಶ್ನೆ ಎದುರಾಗಿದೆ. ಕಂಟ್ರಾಕ್ಟರ್ಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಸಣ್ಣಪುಟ್ಟ ಸಮಸ್ಯೆಗಳನ್ನೂ ಪರಿಹರಿಸದೆ ನೆಪ ಹೇಳುತ್ತಿದ್ದಾರೆ ಅನ್ನೋದು ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ. ಕಾಮಗಾರಿ ನಿಧಾನಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವರು, ರಸ್ತೆಗಳ ದುಸ್ಥಿತಿ ಕಂಡು ಮತ್ತಷ್ಟು ಕೆರಳಿದ್ದಾರೆ.
ಸರ್ವೀಸ್ ರಸ್ತೆಯ ತುಂಬೆಲ್ಲ ಗುಂಡಿಗಳು, ವಾಹನ ಸವಾರರಿಗೆ ಸಂಚರಿಸಲು ಸರಿಯಾದ ಜಾಗವೂ ಇಲ್ಲ. ಇತ್ತ ಮೆಟ್ರೋ ಕಾಮಗಾರಿ ಹೆಸರಲ್ಲಿ ರಸ್ತೆಯ ಬಹುಭಾಗಕ್ಕೆ ಬ್ಯಾರಿಕೇಡ್ ಹಾಕಲಾಗಿದೆ. ಇದನ್ನ ಕಂಡ ಸಚಿವ ಕೃಷ್ಣಬೈರೇಗೌಡ ಚೀಫ್ ಇಂಜಿನಿಯರ್ಗೇ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ನೀವು ನಿಜವಾಗ್ಲೂ ಇಂಜಿನಿಯರಿಂಗ್ ಮಾಡಿದ್ದೀರಾ? ಈ ರಸ್ತೆಯಲ್ಲಿ ಯಾರಾದ್ರೂ ಸಂಚಾರ ಮಾಡಬಹುದಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೈಮುಗಿದು ಕೇಳಿದ್ದಕ್ಕೆ ಮಾತ್ರ ಉತ್ತರ ಕೊಡಿ ಎಂದು ಹೇಳುವ ಮೂಲಕ ಅಧಿಕಾರಿಗಳ ಉತ್ತರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಕಾಮಗಾರಿ ನಿರ್ವಹಿಸುವ ಅಧಿಕಾರಿಗಳೇ ರಸ್ತೆ ಸಮಸ್ಯೆಗೆ ಉತ್ತರ ಕೊಡದಿದ್ದರೆ ಜನರ ಸಮಸ್ಯೆ ಬಗೆಹರಿಸುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಅನಗತ್ಯ ಬ್ಯಾರಿಕೇಡ್ ತೆರವಿಗೆ ಸಚಿವರ ಡೆಡ್ಲೈನ್:
ಮೆಟ್ರೋ ಕಾಮಗಾರಿ ನಡೆಯಲಿ, ಆದರೆ ಅದರ ಹೆಸರಲ್ಲಿ ಸಾರ್ವಜನಿಕರ ರಸ್ತೆಗಳನ್ನೇ ಒತ್ತುವರಿ ಮಾಡಿಕೊಳ್ಳುವುದು ಯಾಕೆ? ಕಾಮಗಾರಿಗೆ ಎಷ್ಟು ಜಾಗ ಬೇಕೋ ಅಷ್ಟನ್ನೇ ಬಳಸಿ, ಅನಗತ್ಯವಾಗಿ ಹೆಚ್ಚುವರಿ ಜಾಗಕ್ಕೆ ಬ್ಯಾರಿಕೇಡ್ ಹಾಕಬೇಡಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಕಂಟ್ರಾಕ್ಟರ್ಗಳಿಗೆ ಜಾಗ ಮಾಡಿಕೊಡುವುದಕ್ಕಾಗಿ ಜನರನ್ನ ಸಂಕಷ್ಟಕ್ಕೆ ತಳ್ಳಬೇಡಿ ಎಂದು ಎಚ್ಚರಿಸಿದ್ದಾರೆ. ಮುಂದಿನ ಮಂಗಳವಾರದೊಳಗೆ ಅನಗತ್ಯ ಬ್ಯಾರಿಕೇಡ್ಗಳನ್ನ ತೆರವುಗೊಳಿಸುವಂತೆ ಡೆಡ್ಲೈನ್ ಕೂಡ ನೀಡಿದ್ದಾರೆ.
ಪಿಂಕ್ ಲೈನ್ ಮೆಟ್ರೋ ಆರಂಭಕ್ಕೆ ದಿನಗಣನೆ:
ಪಿಂಕ್ ಲೈನ್ ಮೆಟ್ರೋ ಆರಂಭಕ್ಕೆ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಪಿಂಕ್ ಲೈನ್ ಎಲಿವೇಟೆಡ್ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ತಾವೇ ದೆಹಲಿಗೆ ತೆರಳಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿರುವ ಸಚಿವರು, ನವೆಂಬರ್ ಮೊದಲ ವಾರದಲ್ಲಿ ಪಿಂಕ್ ಲೈನ್ ಮೆಟ್ರೋ ಸೇವೆ ಆರಂಭಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಲ್ಯಾಬ್ ಟೆಕ್ನಿಷಿಯನ್ ಬಲಿ
