– ಮಾಕುಟ್ಟ ರಾಷ್ಟ್ರೀಯ ಹೆದ್ದಾರಿ ಕುಸಿತ
– ಮೂಡಿಗೆರೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
ಮಡಿಕೇರಿ/ಚಿಕ್ಕಮಗಳೂರು: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು ಆಗಸ್ಟ್ 9ರವರೆಗೆ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಮಳೆಯೊಂದಿಗೆ ಜೋರಾಗಿ ಗಾಳಿ ಬೀಸುತ್ತಿರುವುದನ್ನ ಕಂಡು ಜನರು ಆತಂಕಕ್ಕೊಳಗಾಗಿದ್ದಾರೆ. ಮಳೆಯಿಂದಾಗಿ ಕಾವೇರಿ ನದಿ ತೀರಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಭಾಗಮಂಡಲ ತಲಕಾವೇರಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಭಾಗಮಂಡಲ ನಾಪೋಕ್ಲು ರಸ್ತೆಗೆ ಒಂದು ಅಡಿ ನೀರು ಬಂದಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
Advertisement
ದಕ್ಷಿಣ ಕೊಡಗಿನ ಗೋಣಿಕೊಪ್ಪ, ಕುಟ್ಟ ಶ್ರೀಮಂಗಲ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಹೊಸದಾಗಿ ನಿರ್ಮಿಸಿರುವ ತಡೆಗೋಡೆ ಕುಸಿದು ರಸ್ತೆಯ ಅರ್ಧ ಭಾಗ ಕೊಚ್ಚಿ ಹೋಗಿದೆ. ಮಾಕುಟ್ಟ ರಾಷ್ಟ್ರೀಯ ಹೆದ್ದಾರಿ ಮಳೆಗೆ ಕುಸಿದು ಹೋಗಿರುವ ಕಾರಣಕ್ಕೆ ಕೇರಳ ಸಂಚಾರ ಬಂದ್ ಅಗಿದೆ.
Advertisement
ಕಳೆದ ಬಾರಿಯು ಮಾಕುಟ್ಟ ಹೆದ್ದಾರಿ ಕುಸಿದುಹೋಗಿತ್ತು. ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿರುವ ಕಾರಣಕ್ಕೆ ಸಾರ್ವಜನಿಕರಿಗೆ ಪ್ರವಾಸಿಗರಿಗೆ ಎಚ್ಚರಿಕೆಯಿಂದ ಇರುವಂತೆ ಕೊಡಗು ಜಿಲ್ಲಾಡಳಿತ ಸೂಚನೆ ನೀಡಿದೆ.
Advertisement
ಇನ್ನೊಂದೆಡೆ ಕಾಫಿನಾಡಲ್ಲಿ ಕೂಡ ಮಳೆ ಅಬ್ಬರ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಮೂಡಿಗೆರೆ ತಹಶೀಲ್ದಾರ್ ರಮೇಶ್ ಆದೇಶ ಹೊರಡಿಸಿದ್ದಾರೆ. ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೈರಾಪುರ, ದಾರದಹಳ್ಳಿ, ಕೊಟ್ಟಿಗೆಹಾರ, ಬಾಳೂರು ಸೇರಿದಂತೆ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇತ್ತ ಪಶ್ಚಿಮ ಘಟ್ಟಗಳ ಸಾಲಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಭಾರೀ ಮಳೆಯಿಂದ ತುಂಗಾ-ಭದ್ರಾ, ಹೇಮಾವತಿ ನದಿಗಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಮೈದುಂಬಿ ಹರಿಯುತ್ತಿದೆ.