ನವದೆಹಲಿ: ಎಐ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ಮುಂದಾಗಿರುವ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮಾತೃಸಂಸ್ಥೆ ಮೆಟಾ (Meta) ಕಂಪನಿ, 8 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು (Job Cut) ಸಿದ್ಧವಾಗಿದೆ.
ಅಮೆರಿಕದ ಮಲ್ಟಿನ್ಯಾಷನಲ್ ಟೆಕ್ ಕಂಪನಿ ಮೆಟಾ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಥ್ರೆಡ್ಸ್ನಂತಹ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ಗಳನ್ನು ಇದು ಹೊಂದಿದೆ. ಎಐ ಆಧಾರಿತ ಹೊಸ ತಂಡಗಳಿಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮೂಲಕ ಕಂಪನಿ ತನ್ನ ಕಾರ್ಯವೈಖರಿಯನ್ನೇ ಬದಲಾಯಿಸಲು ಮುಂದಾಗಿದೆ.
ಪ್ರಸ್ತುತ ಸಿಇಒ ಮಾರ್ಕ್ ಜುಕರ್‌ಬರ್ಗ್ ನೇತೃತ್ವದಲ್ಲಿ, ಕಂಪನಿಯು ಕೃತಕ ಬುದ್ಧಿಮತ್ತೆ (AI) ಮತ್ತು ವರ್ಚುವಲ್ ರಿಯಾಲಿಟಿ (VR) ತಂತ್ರಜ್ಞಾನಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ. ಆದ್ದರಿಂದ ಮೆಟಾ ಕಂಪನಿ ಮೇ 20ರಂದು ಜಾಗತಿಕ ಮಟ್ಟದಲ್ಲಿ ಸುಮಾರು 10% ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿದೆ. ಇದೇ ವೇಳೆ ಸುಮಾರು 7 ಸಾವಿರ ಉದ್ಯೋಗಿಗಳನ್ನು ಎಐ ಆಧಾರಿತ ಹೊಸ ತಂಡಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.

ಕಂಪನಿಯಲ್ಲಿ ನಿರ್ವಹಣಾ ಹಂತಗಳನ್ನು ಕಡಿಮೆ ಮಾಡಿ, ಸಣ್ಣ ತಂಡಗಳ ಮೂಲಕ ವೇಗವಾಗಿ ಕೆಲಸ ಮಾಡುವ ಮಾದರಿಯನ್ನು ಜಾರಿಗೆ ತರಲಾಗುತ್ತಿದೆ. ಎಐ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಂಸ್ಥೆಯ ರಚನೆಯನ್ನು ಬದಲಾಯಿಸಲಾಗುತ್ತಿದೆ ಎಂದು ಮೆಟಾ ಹೇಳಿದೆ. ಈ ಬೆಳವಣಿಗೆಯಿಂದ ಕಂಪನಿಯ ಐವರು ಉದ್ಯೋಗಿಗಳಲ್ಲಿ ಒಬ್ಬ ವರ್ಗಾವಣೆ, ಹುದ್ದೆ ಬದಲಾವಣೆ ಅಥವಾ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ.
ಮೆಟಾ ಈಗಾಗಲೇ 2026ರಲ್ಲಿ ಎಐ ಮೂಲಸೌಕರ್ಯ ಮತ್ತು ಉತ್ಪನ್ನಗಳಿಗಾಗಿ 125 ರಿಂದ 145 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆ ಘೋಷಿಸಿದೆ. ಅಪ್ಲೈಡ್ ಎಐ ಇಂಜಿನಿಯರಿAಗ್, ಏಜೆಂಟ್ ಟ್ರಾನ್ಸ್ಫಾರ್ಮೇಶನ್ ಸೇರಿದಂತೆ ಹಲವು ಹೊಸ ಎಐ ತಂಡಗಳನ್ನು ರಚಿಸಲಾಗುತ್ತಿದೆ. ಮಾನವರ ಕೆಲಸವನ್ನು ಸ್ವಯಂಚಾಲಿತವಾಗಿ ನಿರ್ವಹಿಸುವ ಎಐ ಏಜೆಂಟ್‌ಗಳನ್ನು ಅಭಿವೃದ್ಧಿಪಡಿಸುವುದೇ ಈ ಯೋಜನೆಗಳ ಉದ್ದೇಶವಾಗಿದೆ.

