ಚೆನ್ನೈ:ಹವಾಮಾನ ಇಲಾಖೆಯು ಸಾಮಾನ್ಯವಾಗಿ ಮಳೆಯಾಗುವ ಸಾಧ್ಯತೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಆದರೆ ಭಾರೀ ಮಳೆಯಾಗುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಲು ಸಾಧ್ಯವಾಗಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸ್ಪಷ್ಟನೆ ನೀಡಿದ್ದಾರೆ.
ಚೆನ್ನೈನ ಹಲವು ಪ್ರದೇಶಗಳಲ್ಲಿ ಗುರುವಾರ ಸುಮಾರು 20 ಸೆಂ.ಮೀ. ಗಿಂತಲೂ ಹೆಚ್ಚು ಮಳೆಯಾಗಿದ್ದು, ಜಲಾವೃತಗೊಂಡ ಪ್ರದೇಶಗಳಲ್ಲಿ ಹೆವಿ ಡ್ಯೂಟಿ ಮೋಟಾರ್‌ಗಳನ್ನು ಬಳಸಿಕೊಂಡು ನೀರನ್ನು ಹೊರಹಾಕಲಾಗಿದೆ. ಎಐಎಡಿಎಂಕೆ ಆಡಳಿತದಲ್ಲಿದ್ದಾಗ ಮೂಲಸೌಕರ್ಯಗಳನ್ನು ಬಲಪಡಿಸುವುದು ಮತ್ತು ಮಳೆ ನೀರು ನಿಲ್ಲುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು
ಮತ್ತೆ ಮಳೆಗಾಲ ಆರಂಭವಾಗುವುದಕ್ಕೂ ಮುನ್ನ ನೀರು ನಿಲ್ಲುವ ಸಮಸ್ಯೆಗಳನ್ನು ಪರಿಹರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹವಾಮಾನ ಇಲಾಖೆ ಸಾಮಾನ್ಯವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂಬುವುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಆದರೆ ಡಿಸೆಂಬರ್ 30ರಂದು ಚೆನ್ನೈನಲ್ಲಿ ಭಾರೀ ಮಳೆಯಾಗುವುದರ ಬಗ್ಗೆ ಮುನ್ಸೂಚನೆ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಅನಿರೀಕ್ಷಿತ ತೀವ್ರ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ತಿಳಿಸಿದ್ದಾರೆ.
ಅನಿರೀಕ್ಷಿತ ಮಳೆ ಮತ್ತು ಹವಾಮಾನ ಕುರಿತಂತೆ ಮುನ್ಸೂಚನೆ ನೀಡುವಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರದಲ್ಲಿ ಉಪಕರಣಗಳನ್ನು ಬದಲಾಯಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅದು ಕೇಂದ್ರ ಸರ್ಕಾರದ ಕೆಲಸವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ವರುಣನ ಆರ್ಭಟಕ್ಕೆ 3 ಬಲಿ – ರಾಜಧಾನಿ ಜಲಾವೃತ
ತಾಂತ್ರಿಕ ಮತ್ತು ಪ್ರಾಯೋಗಿಕ ತೊಂದರೆ ಕಾರಣದಿಂದಾಗಿ, ಭಾರೀ ಮಳೆ ಕುರಿತು ಮುನ್ಸೂಚನೆ ನೀಡಲು ಸಾಧ್ಯವಾಗಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.