ಕೋಲ್ಕತ್ತಾ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ (Lionel Messi) ಕಾರ್ಯಕ್ರಮವನ್ನು ಸರಿಯಾಗಿ ಆಯೋಜನೆ ಮಾಡದ್ದಕ್ಕೆ ಟೀಕೆಗೆ ಗುರಿಯಾಗಿದ್ದ ಪಶ್ಚಿಮ ಬಂಗಾಳ(West Bengal) ಕ್ರೀಡಾ ಸಚಿವ ಅರೂಪ್ ಬಿಸ್ವಾಸ್(Aroop Biswas) ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಂಗೀಕರಿಸಿದ್ದಾರೆ.
ಟಿಕೆಟ್ ಬೆಲೆ ದುಬಾರಿಯಾಗಿದ್ದರೂ ಮೆಸ್ಸಿ ನೋಡಲೆಂದು ಡಿ.13 ರಂದು ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸಿದ್ದರು. ಆದರೆ GOAT ಕಾರ್ಯಕ್ರಮ ಕೇವಲ 10 ನಿಮಿಷದಲ್ಲಿ ಕೊನೆಗೊಂಡಿತ್ತು. ಇದಕ್ಕೆ ಸಿಟ್ಟಾದ ಅಭಿಮಾನಿಗಳು ಚೇರ್‌ಗಳನ್ನು ಕಿತ್ತೆಸೆದಿದ್ದರು. ನೀರಿನ ಬಾಟಲಿಗಳನ್ನು ಮೈದಾನಕ್ಕೆ ಎಸೆದು ಆಕ್ರೋಶ ಹೊರಹಾಕಿದ್ದರು.
ಅಭಿಮಾನಿಗಳ ದಾಂಧಲೆಯ ನಂತರ ಕಾರ್ಯಕ್ರಮದ ಪ್ರಮುಖ ಸಂಘಟಕರಾದ ಶತಾದ್ರು ದತ್ತ ಅವರನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಸಂಬಳದಲ್ಲಿ 70% ಇಳಿಕೆ – 7 ಕೋಟಿಗೆ ಆರ್‌ಸಿಬಿಗೆ ವೆಂಕಟೇಶ್ ಅಯ್ಯರ್ ಮಾರಾಟ
ನಿಗದಿ ಪ್ರಕಾರ ಮೆಸ್ಸಿ ಮೈದಾನದ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಬರಬೇಕಿತ್ತು. ಆದರೆ ಕಾರ್ಯಕ್ರಮದಲ್ಲಿನ ಅವ್ಯವಸ್ಥೆಯಿಂದ 10 ನಿಮಿಷದಲ್ಲೇ ಮೆಸ್ಸಿ ಮೈದಾನ ತೊರೆದಿದ್ದರು. ಮೈದಾನ ತೊರೆದ ಬೆನ್ನಲ್ಲೇ ಸಿಟ್ಟಾದ ಅಭಿಮಾನಿಗಳು ನಾವು ಮೆಸ್ಸಿಯ ಮುಖವನ್ನು ನೋಡಿಲ್ಲ. 10 ನಿಮಿಷದ ಕಾರ್ಯಕ್ರಮಕ್ಕೆ ದುಬಾರಿ ಬೆಲೆ ಯಾಕೆ ಎಂದು ಪ್ರಶ್ನಿಸಿದ್ದರು.
ಮಸ್ಸಿಯನ್ನು ನಾವು ನೋಡಲೇ ಇಲ್ಲ. ಕೇವಲ ರಾಜಕಾರಣಿಗಳು ಮಾತ್ರ ಮೆಸ್ಸಿ ಜೊತೆ ಫೋಟೋ, ಹ್ಯಾಂಡ್ ಶೇಕ್ ಮಾಡಿದ್ದಾರೆ. ಬಹಳ ಕೆಟ್ಟದ್ದಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದು ಅಭಿಮಾನಿಗಳು ಸಿಟ್ಟು ಹೊರ ಹಾಕಿದ್ದರು. ಇದನ್ನೂ ಓದಿ: ಕ್ಯಾಮರೂನ್ ಗ್ರೀನ್ 25.20 ಕೋಟಿಗೆ ಸೇಲಾದ್ರೂ ಸಿಗೋದು 18 ಕೋಟಿ!
ಕೋಲ್ಕತ್ತಾ ನಂತರ ಹೈದರಾಬಾದ್, ಮುಂಬೈ, ದೆಹಲಿಗೆ ಮೆಸ್ಸಿ ತೆರಳಿದ್ದರು. ಇಲ್ಲಿ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಡೆದಿತ್ತು.


