ದಾವಣಗೆರೆ: ಜಾತ್ರೆ, ಪೂಜೆ ಎಂದರೆ ಸಾಕು ಹೆಂಗಳೆಯರೇ ಮುಂದೆ ನಿಂತು ಸಡಗರ ಸಂಭ್ರಮದಿಂದ ಆಚರಣೆ ಮಾಡೋದು ಮಾಮೂಲು. ದಾವಣಗೆರೆಯ ಸುತ್ತಮುತ್ತಲು ನಡೆಯುವ ಮಹೇಶ್ವರ ಜಾತ್ರೆ ಕೇವಲ ಪುರುಷರೇ ನಡೆಸಬೇಕು. ದೇವರ ದರ್ಶನ, ಅಡುಗೆ ಮಾಡುವುದು ಹಾಗೂ ಊಟ ಮಾಡುವುದು ಎಲ್ಲ ಗಂಡಸರೆ. ಹೀಗಾಗಿ ಇದೊಂದು ಗಂಡಸರ ಜಾತ್ರೆ ಎಂದೆ ಪ್ರಸಿದ್ಧಿಯಾಗಿದೆ..
ತಾಲೂಕಿನ ಬಸಾಪೂರದ ಮಹೇಶ್ವರ ಸ್ವಾಮಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದ್ದು, ಗ್ರಾಮ ಬಿಟ್ಟು ಎರಡು ಕಿಲೋ ಮೀಟರ್ ದೂರದಲ್ಲಿರುವ ಮಹೇಶ್ವರ ಸ್ವಾಮೀ ಉಗ್ರ ದೇವರೆಂದು ನಂಬಿಕೆ ಇದೆ. ಭಕ್ತರಲ್ಲಿ ಯಾವುದೇ ತಪ್ಪಾದರೂ ಶಿಕ್ಷೆ ಖಚಿತವಂತೆ. ಹೀಗಾಗಿ ಸುತ್ತಲಿನ ಗ್ರಾಮಗಳ ಜನರು ಇಲ್ಲಿ ಕಟ್ಟು ನಿಟ್ಟಾಗಿ ಬಂದು ಜಾತ್ರೆಯ ದಿನ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿಯೇ ಹೋಗಬೇಕು. ಇದು 400 ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಈ ಜಾತ್ರೆಯ ವಿಶೇಷವೆಂದರೆ ಪುರುಷರಿಗೆ ಮಾತ್ರ ಈ ಕ್ಷೇತ್ರದಲ್ಲಿ ಪ್ರವೇಶ. ಅಪ್ಪಿತಪ್ಪಿಯೂ ಕೂಡಾ ಮಹಿಳೆಯರು ಅಥವಾ ಸಣ್ಣ ಹೆಣ್ಣು ಮಗು ಕೂಡಾ ಇಲ್ಲಿ ಕಾಲಿಡುವಂತಿಲ್ಲ. ಇದೇ ಮಹೇಶ್ವರ ಸ್ವಾಮೀಯ ಕಟ್ಟಾಜ್ಞೆಯಂತೆ. ಹೀಗಾಗಿ ಗಂಡಸರೇ ಇಲ್ಲಿ ಜಾತ್ರೆಯ ಪೂಜಾ ಕಾರ್ಯ ಮಾಡಬೇಕು. ಅದರಲ್ಲೂ ಪ್ರತಿಯೊಂದು ಮನೆಯ ಹಿರಿಮಗ ಕಡ್ಡಾಯವಾಗಿ ಮಹೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ ಹಾಜರಾಗಿರಲೇ ಬೇಕು. ಹೆಂಗಸರೆಂದರೇ ಆಗದ ಈ ಮಹೇಶ್ವರ ಸ್ವಾಮಿಗೆ ದೇವಸ್ಥಾನ ಸಹ ಇಲ್ಲ, ದೊಡ್ಡ ಮರದ ಕೆಳಗೆ ಇತನಿಗೆ ಪೂಜೆ ಪುರಸ್ಕಾರಗಳು ನಡೆಯುತ್ತಿವೆ.
ಎಷ್ಟೇ ಜನ ಭಕ್ತರು ಬಂದರೂ ಸಹ ಅವರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಅನ್ನ ಸಾಂಬಾರ್ ಹಾಗೂ ಬಾಳೆ ಹಣ್ಣು ಇಲ್ಲಿನ ಪ್ರಸಾದ. ಬಾಳೆ ಎಂದರೆ ಮಹೇಶ್ವರ ಸ್ವಾಮೀಯ ಪ್ರತೀಕವಂತೆ. ಪ್ರತಿಯೊಬ್ಬರು ಬಂದು ಇಲ್ಲಿ ಬಾಳೆ ಹಣ್ಣು ಪ್ರಸಾದ ಸ್ವೀಕರಿಸುವುದು ಕಡ್ಡಾಯ. ಮೇಲಾಗಿ ದೇವರಿಗೆ ನಮಸ್ಕರಿಸಿದರೆ ವಿಭೂತಿ ಧರಿಸುವುದು ಕಡ್ಡಾಯವಂತೆ. ಇನ್ನೊಂದು ವಿಶೇಷವೆಂದರೆ ಇಲ್ಲೊಂದು ಬಾವಿ ಇದ್ದು, ಈ ಬಾವಿಗೆ ಬಾಳೆಹಣ್ಣಗಳನ್ನ ಬಿಡಲಾಗುತ್ತದೆ. ಇದರಲ್ಲಿ ಹಾಕಿದ ಎಲ್ಲ ಬಾಳೆ ಹಣ್ಣು ಮುಳುಗಲ್ಲವಂತೆ. ಹೀಗೆ ಮುಳುಗಿದರೆ ಆಪತ್ತು ಕಾದಿದೆ ಎಂಬುದು ಭಕ್ತರ ಬಲವಾದ ನಂಬಿಕೆ. ಹೀಗಾಗಿ ಪ್ರತಿಯೊಂದನ್ನ ಕಟ್ಟುನಿಟ್ಟಾಗಿ ಮಾಡಬೇಕು. ಇಷ್ಟೆಲ್ಲಾ ಅದ್ಧೂರಿಯಾಗಿ ನಡೆಯುವ ಈ ಜಾತ್ರೆಗೆ ಸ್ತ್ರೀ ಪ್ರವೇಶ ಯಾಕೆ ಇಲ್ಲಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲ.