ಕುಂಭದ್ರೋಣ ಮಳೆಗೆ ಮುಳುಗಿದ ಕಡಲೂರು – ರಸ್ತೆ, ಮನೆಗಳು ಜಲಾವೃತ, ಕಟ್ಟಡ ಕುಸಿತ – ಮಹಾಮಳೆಗೆ 9 ಮಂದಿ ಮರಣ

Public TV
2 Min Read
Mekunu

ಬೆಂಗಳೂರು: ಮೆಕುನು ಚಂಡಮಾರುತದಿಂದಾಗಿ ಕಡಲ ಕಿನಾರೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಉಡುಪಿ, ಮಂಗಳೂರು, ಕಾರವಾರ ಸೇರಿದಂತೆ ಕರಾವಳಿ ಭಾಗದ ಜನರು ಮೆಕುನು ಚಂಡಮಾರುತಕ್ಕೆ ನಲುಗಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಒಮಾನ್ ದೇಶಕ್ಕೆ ಅಪ್ಪಳಿಸಿದ್ದ ಮೆಕುನು ಚಂಡಮಾರುತ ಈಗ ಭಾರತೀಯ ಕರಾವಳಿಯತ್ತ ವ್ಯಾಪಿಸಿದ್ದು ಮಂಗಳೂರು ಸೇರಿ ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ.

ಉಡುಪಿ: ಉಡುಪಿಯಲ್ಲಿ ಮಳೆಯ ರೌದ್ರನರ್ತನಕ್ಕೆ ಬಾಲಕಿಯೊಬ್ಬಳು ಕಣ್ಮೆರೆಯಾಗಿದ್ದಾರೆ. 9 ವರ್ಷದ ನಿಧಿ ತನ್ನ ಅಕ್ಕನೊಂದಿಗೆ ಸೈಕಲ್‍ನಲ್ಲಿ ಶಾಲೆಯಿಂದ ಮನೆಗೆ ತೆರಳುವಾಗ ಪಟ್ಲದ ಕಿರು ಸೇತುವೆ ದಾಟುವ ಸಂದರ್ಭದಲ್ಲಿ ಮಕ್ಕಳಿಬ್ಬರು ಕೊಚ್ಚಿ ಹೋಗಿದ್ದಾರೆ. ಘಟನೆ ಕಂಡ ಸ್ಥಳೀಯರು ನಿಧಿ ಅಕ್ಕ ನಿಶಾಳನ್ನು ಕಾಪಾಡಿದ್ದಾರೆ. ಕಣ್ಮರೆಯಾಗಿರುವ ನಿಧಿ ಆಚಾರ್ಯಳಿಗಾಗಿ ಮಳೆಯ ನಡುವೆಯೂ ಅಗ್ನಿ ಶಾಮಕ ಸಿಬ್ಬಂದಿ ಶೋಧಕಾರ್ಯ ಮುಂದುವರಿಸಿದ್ದಾರೆ. ಇನ್ನು ಕಾರ್ಕಳದ ಬೈಲೂರಿನಲ್ಲಿ ಸಿಡಿಲು ಬಡಿದು ಗ್ರಾಮ ಪಂಚಾಯತ್ ಸದಸ್ಯೆ ಶೀಲಾ ನಲ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಸುನೀಲ್ ಕುಮಾರ್ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

MNG Mekunu 3

ಮಂಗಳೂರು: ಆರಂಭಿಕ ಮಹಾಮಳೆ ಮರಣ ಮೃದಂಗ ಬಾರಿಸಿದ್ದು. ಕೆಪಿಟಿ ಬಳಿಯ ಉದಯನಗರದಲ್ಲಿ ಗುಡ್ಡ ಕುಸಿದ ಪರಿಣಾಮ 61 ವರ್ಷದ ಮೋಹಿನಿ ಎಂಬವರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ವಿಳಂಬ ಆಗಿದ್ದರಿಂದಾಗಿ ಮಹಿಳೆ ಮೃತಪಟ್ಟಿದ್ದು ಸಂಜೆ 8 ಗಂಟೆ ಸುಮಾರಿಗೆ ಶವ ಹೊರತೆಗೆಯಲಾಯ್ತು. ಕೊಡಿಯಾಲ್ ಬೈಲಿನಲ್ಲಿಯೂ ತಗ್ಗು ಪ್ರದೇಶ ಜಲಾವೃತಗೊಂಡಿದ್ದು ಅಲ್ಲಿ ಒಬ್ಬಂಟಿ ವಾಸವಿದ್ದ ಮುಕ್ತಾ ಬಾಯಿ ಎಂಬ 80 ವರ್ಷದ ವೃದ್ಧೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ನೂರಾರು ಮನೆ, ವಾಣಿಜ್ಯ ಸಂಕೀರ್ಣಗಳಿಗೆ ಮಳೆ ನೀರು ನುಗ್ಗಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನ ಅತ್ತಾವರ, ಅಳಕೆ, ಕುದ್ರೋಳಿ, ಕೊಟ್ಟಾರ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಳಕೆ ಪ್ರದೇಶದಲ್ಲಿ ನೀರಿನಿಂದ ಆವೃತಗೊಂಡಿದ್ದ ಗುಜರಾತಿ ಸ್ಕೂಲ್ ಮಕ್ಕಳನ್ನು ಬೋಟ್ ಮೂಲಕ ಸ್ಥಳಾಂತರ ಮಾಡಲಾಯ್ತು.

ಕಾರವಾರ: ಅರಬ್ಬಿ ಸಮುದ್ರದಲ್ಲಿ ಅಲೆಗಳ ಏರಿಳಿತ ತೀವ್ರವಾಗಿದೆ. ಕಾರವಾರದಿಂದ 20 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಿದೆ. ತಮಿಳುನಾಡು ಮೂಲದ 2 ಬೋಟ್‍ಗಳಲ್ಲಿ ಒಂದು ಮುಳುಗಿದ್ದು, ಮುಳುಗುವ ಹಂತದಲ್ಲಿದ್ದ ಮತ್ತೊಂದು ಬೋಟ್ ಮತ್ತು ನಾಲ್ವರು ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕರಾವಳಿ ರಕ್ಷಣಾ ತಂಡದಿಂದ ಕಾಣೆಯಾದ ಮೀನುಗಾರರಿಗಾಗಿ ಶೋಧ ನಡೆಸಲಾಗ್ತಿದೆ. ಚಿಕ್ಕಮಗಳೂರಿನ ಮಲೆನಾಡಿನ ಭಾಗ ಹಾಗೂ ಶಿವಮೊಗ್ಗದ ಆಯನೂರಿನಲ್ಲೂ ಭಾರೀ ಮಳೆಯಾಗಿದೆ.

MNG Mekunu 2

ಹಾವೇರಿ: ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದ್ದು ಸಿಡಿಲು ಬಡಿದು ಓರ್ವ ಕುರಿಗಾಹಿ ಸಾವನ್ನಪ್ಪಿರುವ ಘಟನೆ ಹಾನಗಲ್ ತಾಲೂಕಿನ ಅಜಗುಂಡಿಕೊಪ್ಪ ಗ್ರಾಮದ ಬಳಿ ನಡೆದಿದೆ. ಚಿಕ್ಕೋಡಿ ನಿವಾಸಿ 22 ವರ್ಷದ ಮಾಳಪ್ಪ ಪೂಜಾರಿ ಮೃತ ದುರ್ದೈವಿ. ಮೃತನ ಕುಟುಂಬಕ್ಕೆ ಜಿಲ್ಲಾಡಳಿತ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದು. ಪ್ರಕೃತಿ ವಿಕೋಪ ಪರಿಹಾರ ನಿಧಿ ಮತ್ತು ಸಿಎಂ ಪರಿಹಾರ ನಿಧಿಯಿಂದ ಹಣ ನೀಡುವುದಾಗಿ ಹಾವೇರಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಹೇಳಿದ್ದಾರೆ.

MNG Mekunu 1

Share This Article
Leave a Comment

Leave a Reply

Your email address will not be published. Required fields are marked *