ಬೆಂಗಳೂರು/ರಾಮನಗರ ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ರಾಜ್ಯದಲ್ಲಿ ಎಲ್ಲ ರೀತಿ ಪ್ರತಿಭಟನೆ, ಪಾದಯಾತ್ರೆಯನ್ನು ನಿಷೇಧಿಸಿ ಸರ್ಕಾರ ಆದೇಶ ಪ್ರಕಟಿಸಿದ್ದರಿಂದ ಇಂದು ರಾಮನಗರ ರಣಾಂಗಣವಾಗುವ ಸಾಧ್ಯತೆಯಿದೆ.
ಪಾದಯಾತ್ರೆ ತಡೆಯುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದು ರಾಮನಗರ ಜಿಲ್ಲೆಯಲ್ಲಿ ಹೆಚ್ಚುವರಿ ಬಂದೋಬಸ್ತ್ ಮಾಡಲಾಗಿದೆ. ಬೆಂಗಳೂರಿನಿಂದ ಕೆಎಸ್‍ಆರ್‌ಪಿ, ಡಿಎಆರ್ ತುಕಡಿಯನ್ನು ಕರೆಸಲಾಗಿದೆ. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು
ಬ್ಯಾರಿಕೇಡ್ ಸಮೇತ ಅಲರ್ಟ್ ಇರುವಂತೆ ಸೂಚನೆ ನೀಡಿದ್ದು ಅರೆಸ್ಟ್ ಮಾಡಿದ ನಾಯಕರನ್ನು ಸಾಗಿಸಲು ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಪೊಲೀಸ್ ಇಲಾಖೆ ಸಿದ್ದತೆ ಮಾಡಿದೆ.
ಡಿಸಿ, ಎಸ್‍ಪಿ ಮೂಲಕ ಪಾದಯಾತ್ರೆ ನಡೆಸದಂತೆ ನೋಟಿಸ್ ನೀಡಲು ಪ್ಲಾನ್ ಮಾಡಿಕೊಂಡಿದೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ರೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ 50ಕ್ಕೂ ಹೆಚ್ಚು ನಾಯಕರನ್ನು ಬಂಧನ ಮಾಡುವ ಸಾಧ್ಯತೆಯಿದೆ.
ಮೊದಲ ಹಂತದ ನಾಯಕರ ಬಳಿಕ 2ನೇ ಹಂತದ ಮುಖಂಡರ ಬಂಧಿಸಲಾಗುತ್ತದೆ. ಉಳಿದವರನ್ನ ಚದುರಿಸಿ ಮೈಕ್ ಮೂಲಕ ಪಾದಯಾತ್ರೆ ನಿರ್ಬಂಧ ಘೋಷಣೆ ಮಾಡಲಾಗುತ್ತದೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಇಂದು ಕ್ಲೈಮ್ಯಾಕ್ಸ್: ಕಾಂಗ್ರೆಸ್ ಪ್ಲ್ಯಾನ್ ಏನು?
ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಮನಗರ ಎಸ್‌ಪಿ ಜೊತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಂಪರ್ಕದಲ್ಲಿದ್ದಾರೆ. ಬೆಳಗ್ಗೆಯಿಂದಲೇ ಪಿನ್ ಟು ಪಿನ್ ಮಾಹಿತಿ ಪಡೆಯುತ್ತಿರುಗ ಸಚಿವ ಆರಗ ಪಾದಯಾತ್ರೆ ತಡೆಯಲು ಮಾಡಿಕೊಂಡಿರುವ ಬಂದೋಬಸ್ತ್ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಕೈಗೊಂಡಿರುವ ಭದ್ರತೆ ಬಗ್ಗೆ ಸಿಎಂಗೂ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.