ನವದೆಹಲಿ: 3.25 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಭಾರತೀಯ ವಾಯುಪಡೆಗೆ (IAF) 114 ರಫೇಲ್ ಯುದ್ಧ ವಿಮಾನಗಳನ್ನು (Rafale Figter Jet) ಖರೀದಿಸುವ ಪ್ರಸ್ತಾವನೆಯನ್ನು ಭಾರತ (India) ಅನುಮೋದಿಸಿದೆ.
ಇದು ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ರಕ್ಷಣಾ ಖರೀದಿಯಾಗಿದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿ (DAC) ಈ ಅನುಮತಿಯನ್ನು ನೀಡಿದೆ..
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಫೆ.17 ರಂದು ದೆಹಲಿಗೆ ಭೇಟಿ ನೀಡುವ ಕೆಲವೇ ದಿನಗಳ ಮೊದಲು ಈ ಮಹತ್ವದ ಬೆಳವಣಿಗೆ ನಡೆದಿದೆ.
ರಕ್ಷಣಾ ಸಚಿವಾಲಯದ ಅನುಮೋದನೆಯ ನಂತರ ಸ್ವಾಧೀನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯ ಭದ್ರತೆ ಕುರಿತ ಸಂಪುಟ ಸಮಿತಿಯಿಂದ ಅಂತಿಮ ಅನುಮತಿ ಬೇಕಾಗುತ್ತದೆ.

ಮೂಲಗಳ ಪ್ರಕಾರ ಈ ಪ್ರಸ್ತಾವನೆಯಲ್ಲಿ 18 ವಿಮಾನಗಳನ್ನು ಫ್ರೆಂಚ್ ರಕ್ಷಣಾ ಕಂಪನಿ ಡಸಾಲ್ಟ್ ಏವಿಯೇಷನ್‌ನಿಂದ ನೇರವಾಗಿ ಖರೀದಿಸಲಾಗುತ್ತದೆ. ಉಳಿದ 96 ಜೆಟ್‌ಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ.
ಈ ಒಪ್ಪಂದವು ಸುಧಾರಿತ ಫೈಟರ್ ಜೆಟ್ ತಂತ್ರಜ್ಞಾನದ ವರ್ಗಾವಣೆಯನ್ನು ಒಳಗೊಂಡಿತ್ತು ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿ ರಫೇಲ್ ವಿಮಾನದ ಭಾಗಗಳನ್ನು ನಿರ್ಮಾಣ ಮಾಡಲಿದೆ.
ಪ್ರಸ್ತುತ ಭಾರತದ ಬಳಿ 36 ರಫೇಲ್ ವಿಮಾನಗಳಿವೆ. ಫ್ರಾನ್ಸ್ ಬಳಿ 225 ವಿಮಾನಗಳಿವೆ. ಒಪ್ಪಂದದಂತೆ ಎಲ್ಲಾ ವಿಮಾನಗಳು ಭಾರತಕ್ಕೆ ಸಿಕ್ಕಿದರೆ ಫ್ರಾನ್ಸ್ ಬಳಿಕ ಅತಿ ಹೆಚ್ಚು ರಫೇಲ್ ವಿಮಾನ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇದನ್ನೂ ಓದಿ: ಇನ್ಮುಂದೆ ಭಾರತದಲ್ಲೇ ತಯಾರಾಗುತ್ತೆ ರಫೇಲ್ ಬಿಡಿಭಾಗಗಳು – ಟಾಟಾ ಜೊತೆ ಡಸಾಲ್ಟ್ ಒಪ್ಪಂದ
ಡಸಾಲ್ಟ್ ಏವಿಯೇಶನ್ ಹಾಗೂ ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿ (ಟಿಎಎಸ್‌ಎಲ್) 2025ರ ಜೂನ್‌ನಲ್ಲಿ 4 ಒಪ್ಪಂದಗಳಿಗೆ ಸಹಿ ಹಾಕಿತ್ತು. ಈ ಒಪ್ಪಂದದ ಅನ್ವಯ ಹೈದರಾಬಾದ್‌ನಲ್ಲಿ ಉತ್ಪಾದನಾ ಘಟಕವನ್ನು ನಿರ್ಮಿಸಿ ಯುದ್ಧ ವಿಮಾನದ ಬಿಡಿಭಾಗಗಳನ್ನು ನಿರ್ಮಾಣ ಮಾಡಲಾಗುತ್ತದೆ
ಈ ಘಟಕದಲ್ಲಿ ರಫೇಲ್ ಫ್ಯೂಸಲೇಜ್ ಅಂದರೆ ವಿಮಾನದ ಪ್ರಧಾನ ಭಾಗವನ್ನು ನಿರ್ಮಿಸಲಾಗುತ್ತದೆ. ಫ್ರಾನ್ಸ್‌ನ ಹೊರಗೆ ರಫೇಲ್ ಫ್ಯೂಸಲೇಜ್ ನಿರ್ಮಿಸುತ್ತಿರುವುದು ಇದೇ ಮೊದಲು ಎಂದು ಡಸಾಲ್ಟ್ ಸಂಸ್ಥೆ ತಿಳಿಸಿತ್ತು.

