ಲಕ್ನೋ: ಕಳೆದ 6 ವರ್ಷಗಳಿಂದಲೂ ಅಕ್ರಮ ಸಂಬಂಧ ಹೊಂದಿದ್ದ ಪ್ರೇಮಿಗಳಿಬ್ಬರಿಗೆ ಪೊಲೀಸ್ ಠಾಣೆಯಲ್ಲೇ ಮದುವೆ ಮಾಡಿಸಿರುವ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಮನೆಯಲ್ಲಿ ತಮ್ಮ ಸಂಬಂಧ ವಿರೋಧಿಸಿದ್ದರಿಂದ ಇಬ್ಬರು ಪ್ರೇಮಿಗಳಿಗೆ ರಾಜಿ ಒಪ್ಪಂದ ಮಾಡಿಸಿ ಪೊಲೀಸ್ ಠಾಣೆಯಲ್ಲೇ ಮದುವೆ ಮಾಡಿಸಲಾಗಿದೆ. ಗಂಟೆಗಟ್ಟಲೇ ಕುಳಿತು ರಾಜೀ ಒಪ್ಪಂದ ನಡೆದ ಬಳಿಕ ಮದುವೆ ಮಾಡಿಸಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪ – 280 ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ
ಸದ್ಯ ಪೊಲೀಸರ ಮಾಹಿತಿ ಪ್ರಕಾರ, ಹುಡುಗಿ ಅದೇ ಗ್ರಾಮದ ಯುವಕನೊಂದಿಗೆ ಸುಮಾರು 6 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಳು. ಈ ಮದುವೆಗೆ ಎರಡೂ ಮನೆಯವರು ಸಿದ್ಧರಿರಲಿಲ್ಲ. ಯುವತಿ ಮನೆಯವರು ಸಾರಾ ಸಗಟಾಗಿ ಮದುವೆಯನ್ನು ನಿರಾಕರಿಸಿದ್ದರು. ದಾರಿ ಕಾಣದ ಹುಡುಗಿ ತನ್ನ ಪ್ರಿಯಕರನ ಮನೆಗೆ ಬಂದು ಆತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.
ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯುವತಿ ತನ್ನ ಪ್ರಿಯಕರನನ್ನು ಮದುವೆಯಾಗಲು ಹಠ ಹಿಡಿದಿದ್ದಳು. ಪೊಲೀಸರು ಎರಡೂ ಕುಟುಂಬವನ್ನು ಒಪ್ಪಿಸಿ ರಾಜಿ ಮಾಡಿದ ಬಳಿಕ ಠಾಣೆಯಲ್ಲೇ ಇಬ್ಬರ ಮದುವೆ ಮಾಡಿಸಲಾಯಿತು.