ಬೆಂಗಳೂರು: ಮೀಟೂ ಆರೋಪ ಮಾಡಿದ್ದ ಎಲ್‍ಎಲ್‍ಬಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ರೀತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ಶನಿವಾರ ನಡೆದಿದೆ.
ಅಂಡಮಾನ್ ಮೂಲದ ಪುಷ್ಪಾ ಅರ್ಚನಲಾಲ್ (26) ಆತ್ಮಹತ್ಯೆ ಮಾಡಿಕೊಂಡ ಎಲ್‍ಎಲ್‍ಬಿ ವಿದ್ಯಾರ್ಥಿನಿ. ಮಲ್ಲೇಶ್ವರಂ 8ನೇ ಅಡ್ಡ ರಸ್ತೆಯ ಲಕ್ಕು ಪಿಜಿಯಲ್ಲಿ ಪುಷ್ಪ ವಾಸವಿದ್ದು, ಅಲ್ಲಿಯ ರೂಮ್‍ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಏನಿದು ಪ್ರಕರಣ?:
ಪುಷ್ಪಾ ಅರ್ಚನಲಾಲ್ 2017ರಲ್ಲಿ ಎಲ್‍ಎಲ್‍ಬಿ ಪದವಿ ಮುಗಿಸಿ ಟ್ರೈನಿಂಗ್ ಪಡೆಯಲು ಬೆಂಗಳೂರಿಗೆ ಬಂದಿದ್ದಳು. ಇಲ್ಲಿನ ಜಯಂತ್ ಎಂ ಪಟ್ಣಣಶೆಟ್ಟಿ ಅಂಡ್ ಅಸೋಸಿಯೇಟ್ಸ್ ನಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದಳು. ಪುಷ್ಪಾ ಕೆಲಸ ಮಾಡುತ್ತಿದ್ದ ಜಾಗದಲ್ಲಿ ವಕೀಲ ಚಂದ್ರನಾಯ್ಕ್ ಎಂಬವರ ಪರಿಚಯವಾಗಿತ್ತು. ಬಳಿಕ ಆತನ ಸಹಾಯದಿಂದ ಪುಷ್ಪಾ ಮಲ್ಲೇಶ್ವರಂ 8ನೇ ಅಡ್ಡ ರಸ್ತೆಯ ಲಕ್ಕು ಪಿಜಿ ಸೇರಿಕೊಂಡಿದ್ದಳು.
ಕೆಲ ದಿನಗಳು ಕಳೆದಂತೆ ಚಂದ್ರನಾಯ್ಕ್ ಮೂಲಕ ಹೈಕೋರ್ಟ್ ಸರ್ಕಾರಿ ಅಭಿಯೋಜನಕ ಚೇತನ್ ದೇಸಾಯಿ ಅವರ ಪರಿಚಯವಾಗಿತ್ತು. ನಂತರ ಚಂದ್ರಶೇಖರ್ ಹಾಗೂ ಚೇತನ್ ಇಂದಿರಾನಗರದ ಎಂಜಿ ರಸ್ತೆಯಲ್ಲಿರುವ ಬಾರ್ ಅಂಡ್ ಪಬ್‍ಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದರು. ಇದಾದ ಬಳಿಕವೂ ವಿವಿಧ ಕಡೆಗಳಿಗೆ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸುತ್ತಿದ್ದರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಕುರಿತು ಪುಷ್ಪಾ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ಹಾಗೂ ಚೇತನ್ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದಳು.
ಪೊಲೀಸರು ಸೆಕ್ಷನ್ 354 (ಮಾನಭಂಗ, ಬಲಪ್ರಯೋಗ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮಗಳು ಪ್ರಕರಣ ದಾಖಲಿಸಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪುಷ್ಪಾ ತಂದೆ ಶನಿವಾರ ಅಂಡಮಾನ್‍ನಿಂದ ಬೆಂಗಳೂರಿಗೆ ಬಂದಿದ್ದಾರೆ. ಪೂರ್ವ ವಲಯದ ಡಿಸಿಪಿ ರಾಹುಲ್ ಕುಮಾರ್ ಅವರನ್ನು ಭೇಟಿ ಮಾಡಿ, ಪ್ರಕರಣ ಕೈಬಿಡುವಂತೆ ಕೇಳಿಕೊಂಡಿದ್ದಾರೆ.
ಪ್ರಕರಣ ವಾಪಾಸ್ ಪಡೆಯಲು ಯುವತಿಯ ಒಪ್ಪಿಗೆ ಬೇಕು ಅಂತ ರಾಹುಲ್ ಕುಮಾರ್ ಅವರು ತಿಳಿಸಿದ್ದಾರೆ. ಹೀಗಾಗಿ ಮಗಳನ್ನು ಕರೆತರುವುದಾಗಿ ತಂದೆ ಅಲ್ಲಿಂದ ತೆರಳಿದ್ದಾರೆ. ಇತ್ತ ಪುಷ್ಪಾ ತಾನು ವಾಸವಿದ್ದ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದಾಗಿ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ.
ಪುಷ್ಪಾ ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv