ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟ ರಚನೆಯಾದ ಬಳಿಕ ಕಾಂಗ್ರೆಸ್ ಸಚಿವ ಸ್ಥಾನದ ಆಕಾಂಕ್ಷಿಗಳು ಪಕ್ಷದ ವಿರುದ್ಧವೇ ಬಂಡಾಯದ ಬಾವುಟ ಹಾರಿಸಲು ಮುಂದಾಗುತ್ತಿದ್ದಾರೆ. ಪತಿ ಎಂ.ಬಿ.ಪಾಟೀಲರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಆಶಾ ಪಾಟೀಲ್ ನೇರವಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೇ ಸಂಪರ್ಕಿಸಿದ್ದಾರೆ ಎಂಬ ಮಾಹಿತಿಗಳು ದೊರೆತಿವೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಕಾರಣದಿಂದ ದೂರ ಉಳಿದಿರುವ ಸೋನಿಯಾ ಗಾಂಧಿ ವಿಶ್ರಾಂತಿಯಲ್ಲಿದ್ದಾರೆ. ಎಂ.ಬಿ.ಪಾಟೀಲ್ ಪತ್ನಿ ಆಶಾರ ಫೋನ್‍ಗೆ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರನ್ನ ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ. ಸೋನಿಯಾ ಗಾಂಧಿಯವರ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ನಾಯಕರು ಎಂ.ಬಿ.ಪಾಟೀಲ್‍ರ ಮನವೊಲಿಕೆಗೆ ಮುಂದಾಗಿದ್ದಾರೆ ಅಂತಾ ಪಕ್ಷದ ಮೂಲಗಳು ತಿಳಿಸಿವೆ.
Advertisement
Advertisement
ಆಶಾ ಪಾಟೀಲ್ ಎಐಸಿಸಿ ಮಹಿಳಾ ನಾಯಕಿಯರ ಜೊತೆ ಆತ್ಮೀಯ ಒಡನಾಟ ಹೊಂದಿರುವ ಕಾರಣ ನೇರವಾಗಿ ಸೋನಿಯಾವರನ್ನೇ ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಕಾಂಗ್ರೆಸ್ ಮಹಿಳಾ ಘಟಕದ ರಾಷ್ಟ್ರಾಧ್ಯಕ್ಷೆ ಸುಷ್ಮಿತಾ ದೇವ್ ಸಹ ಆಶಾ ಆಪ್ತರಾಗಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಷ್ಮಿತಾ ಜೊತೆಯಲ್ಲೂ ಮಾತನಾಡಿರುವ ಆಶಾ ಪಾಟೀಲ್, ತಮ್ಮ ಪತಿ ಪಕ್ಷಕ್ಕಾಗಿ ಮಾಡಿದ ಕೆಲಸಗಳ ಬಗ್ಗೆ ಹೇಳಿದ್ದಾರೆ.
Advertisement
ಆಶಾ ಪಾಟೀಲ್ ಸೋನಿಯಾ ಗಾಂಧಿ ಅವರನ್ನ ನೇರವಾಗಿ ಸಂಪರ್ಕಿಸಿದ ಫಲವಾಗಿ ಈ ಪ್ರಕರಣ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಎಂ.ಬಿ.ಪಾಟೀಲ್‍ರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ.
Advertisement
ರಾಜ್ಯ ಚುನಾವಣಾ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೇರಳದಲ್ಲಿದ್ದು, ಮಧ್ಯಾಹ್ನದ ವೇಳೆಗೆ ದೆಹಲಿ ತಲುಪುವ ಸಾಧ್ಯತೆ ಇದೆ. ಜೊತೆಗೆ ಡಿಸಿಎಂ ಪರಮೇಶ್ವರ್ ಇಂದಿನ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇನ್ನು, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ ಗುಂಡೂರಾವ್ ಅವರಿಗೂ ರಾಹುಲ್ ಬುಲಾವ್ ನೀಡಿದ್ದು, ಅವರು ಸಹ ನಿನ್ನೆಯೇ ದೆಹಲಿ ತಲುಪಿದ್ದಾರೆ. ಅಂದಹಾಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಹೆಸರು ಚಲಾವಣೆಯಲ್ಲಿತ್ತು. ಈ ಮಧ್ಯೆ ಇವತ್ತಿನ ಸಭೆಗೆ ದಿನೇಶ್ ಗುಂಡೂರಾವ್ ಅವರನ್ನ ಕರೆಸಿದ್ದು, ಕೆಪಿಸಿಸಿ ಪಟ್ಟವನ್ನು ಎಂ.ಬಿ ಪಾಟೀಲ್‍ಗೆ ವಹಿಸಲಿದ್ಯಾ ಅನ್ನೋ ಕುತೂಹಲ ಮೂಡಿಸಿದೆ.