– ಎಂಬಿ ಪಾಟೀಲ್ ಆಕ್ರೋಶಕ್ಕೆ ದಂಗಾದ ಸಚಿವರು
– ಜಾತಿ ಗಣತಿಗೆ ಲಿಂಗಾಯತರಿಂದ ಭಾರೀ ವಿರೋಧ
ಬೆಂಗಳೂರು: “ಲಿಂಗಾಯತರನ್ನು (Lingayat) ತುಂಡು ತುಂಡು ಮಾಡ್ತಾ ಇದ್ದೀರಿ? ಈ ರೀತಿ ಸಮೀಕ್ಷೆ ಮಾಡಲು ಹೇಳಿದವರು ಯಾರು? ಕುಲಶಾಸ್ತ್ರೀಯ ಅಧ್ಯಯನ ಯಾರು ಮಾಡೋದು?” – ಇದು ಸಚಿವ ಎಂಬಿ ಪಾಟೀಲ್ (MB Patil) ಆಕ್ರೋಶ ವ್ಯಕ್ತಪಡಿಸಿದ ಪರಿ.
ಇಂದು ಸಂಜೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯಿತು. ಈ ವೇಳೆ ಲಿಂಗಾಯತ ಶಾಸಕರು ಜಾತಿ ಜನಗಣತಿಗೆ ಭಾರೀ ವಿರೋಧ ವ್ಯಕ್ತಪಡಿಸಿದರು.
ಸಚಿವ ಎಂಬಿ ಪಾಟೀಲ್ ಅಂತೂ ಎದ್ದು ನಿಂತು ಟೇಬಲ್ ಕುಟ್ಟಿ ಕೂಗಾಡಿದ್ದಾರೆ. ನಮ್ಮ ಸಮಾಜವನ್ನು ತುಂಡು ತುಂಡು ಮಾಡ್ತಾ ಇದ್ದೀರಿ? ತುಂಡು ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿ ಪೇಪರ್‌ಗಳನ್ನು ಎಸೆದು ಹಾಕಿದ್ದಾರೆ. ಎಂಬಿಪಿ ಆಕ್ರೋಶಕ್ಕೆ ಸಭೆಯಲ್ಲಿದ್ದ ಸಚಿವರು, ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.
ಇಲ್ಲಿಯವರೆಗೆ ಕ್ಯಾಬಿನೆಟ್ ಸಭೆ ಸಾಮಾನ್ಯ ಸಭೆಯಾಗಿ ನಡೆಯುತ್ತಿತ್ತು. ಆದರೆ ಇಂದಿನ ಸಭೆ ವಿಧಾನಸಭೆಯಲ್ಲಿ ಹೇಗೆ ವಿರೋಧ ಪಕ್ಷಗಳು ಮತ್ತು ಪ್ರತಿ ಪಕ್ಷಗಳ ಸದಸ್ಯರು ಕಿತ್ತಾಡುತ್ತಾರೋ ಅದೇ ರೀತಿಯಾಗಿ ಸಚಿವರು ಕಿತ್ತಾಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಈಶ್ವರ್ ಖಂಡ್ರೆ ಅವರು ಯಾವ ಆಧಾರದ ಮೇಲೆ ಹೊಸ ಜಾತಿಗಳನ್ನು ಸೃಷ್ಟಿ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರೆ ನಮ್ಮ ಜಾತಿ ಬಗ್ಗೆ ನಿಮಗೆ ಏನು ಗೊತ್ತು ಎಂದು ಎಸ್‌ಎಸ್ ಮಲ್ಲಿಕಾರ್ಜುನ ಸಿಟ್ಟು ಹೊರ ಹಾಕಿದರು. ಸಚಿವರ ಮಾತಿಗೆ ಧ್ವನಿಗೂಡಿಸಿದ ಹೆಚ್‌ಕೆ ಪಾಟೀಲ್ ಈ ಜಾತಿಗಳನ್ನು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ ಎಂದು ಗರಂ ಆಗಿಯೇ ಮಾತನಾಡಿದರು.