ನವದೆಹಲಿ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಶಾಸಕ ಎಂಬಿ ಪಾಟೀಲ್ ರಾತ್ರೋ ರಾತ್ರಿ ಹೈ ಕಮಾಂಡ್ ಮೊರೆ ಹೋಗಿದ್ದಾರೆ.
ಪಬ್ಲಿಕ್ ಟಿವಿ ಗೆ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಎಂ ಬಿ ಪಾಟೀಲ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಅಹಮದ್ ಪಟೇಲ್ ಜೊತೆ ಚರ್ಚೆ ನಡೆಸಿ ತಮಗೆ ಡಿಸಿಎಂ ಹುದ್ದೆ ಇಲ್ಲವೇ ಕೆಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ರಾಹುಲ್ ಗಾಂಧಿಯವರಲ್ಲಿ ಮನವಿ ಮಾಡಿದ್ದಾರೆ.
Advertisement
ಭೇಟಿ ನಂತರ ಮಾತನಾಡಿದ ಪಾಟೀಲ್ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಗೆ ತಿಳಿಸಿದ್ದೇನೆ. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೇ ನಾನು ಅವರಲ್ಲಿ ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವೂ ಕಾರಣವಲ್ಲ. ಬಿಜೆಪಿಯವರ ಜೊತೆಗೂ ಸಂಪರ್ಕ ಇಲ್ಲ. ಸುಮ್ಮನೆ ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಅಂತ ಸ್ಪಷ್ಟನೆ ನೀಡಿದರು.
Advertisement
ಇದಕ್ಕೂ ಮುನ್ನ ಪಾಟೀಲ್ ರ ಪತ್ನಿ ಆಶಾ ಪಾಟೀಲ್ ದೂರವಾಣಿ ಮೂಲಕ ಸೋನಿಯಾ ಗಾಂಧಿಯವರನ್ನು ಸಂಪರ್ಕಿಸಿ ತಮ್ಮ ಪತಿಗಾದ ಅನ್ಯಾಯದ ಅಳಲನ್ನು ತೋಡಿಕೊಂಡಿದ್ದಾರೆ ಅಂತಾನೂ ತಿಳಿದುಬಂದಿದೆ. ಈ ಬಗ್ಗೆ ಸಚಿವ ಆರ್ ವಿ ದೇಶಪಾಂಡೆ ಪ್ರತಿಕ್ರಿಯಿಸಿ ಇಂಥ ಸಂದರ್ಭಗಳಲ್ಲಿ ಆಕಾಂಕ್ಷಿಗಳು- ಬೆಂಬಲಿಗರ ಅಸಮಾಧಾನ ಸಹಜ. ಸಮಯ ಸರಿದಂತೆ ಎಲ್ಲಾ ಸರಿಹೋಗುತ್ತದೆ ಎಂದಿದ್ದಾರೆ.
Advertisement
ರಾಹುಲ್ ಎಂಬಿಪಿಗೆ ಹೇಳಿದ್ದೇನು?
ಪಾಟೀಲ್ ರ ಮಾತಿಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ನಿಮ್ಮನ್ನು ಡಿಸಿಎಂ ಮಾಡಲು ಆಗಲ್ಲ, ಬೇಕಾದರೆ ಬದಲಿ ಹುದ್ದೆ ನೀಡುತ್ತೇವೆ. ಸಮುದಾಯಗಳ ಪೈಕಿ ಸಚಿವ ಸ್ಥಾನ ನೀಡುವ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಆರು ಸ್ಥಾನಗಳ ಪೈಕಿ ಸೂಕ್ತ ಆಯ್ಕೆ ಮಾಡಲಾಗುವುದು. ರಾಜ್ಯದಲ್ಲಿ ಹಿರಿಯ ನಾಯಕರ ನಾಯಕತ್ವದಲ್ಲಿ ಪಕ್ಷ ಬಲಿಷ್ಠವಾದರೆ ಅದರ ಲಾಭ ನಿಮಗೇ ಸಿಗುತ್ತದೆ. ಅತಿ ಶೀಘ್ರದಲ್ಲಿಯೇ ರಾಜ್ಯ ನಾಯಕರ ಒಳ ಜಗಳದ ಬಗ್ಗೆ ಗಮನ ಹರಿಸಲಾಗುವುದು. ಸಂದರ್ಭಕ್ಕೆ ತಕ್ಕಂತೆ ಎಲ್ಲಾ ನಾಯಕರಿಗೂ ಸೂಚನೆಗಳನ್ನೂ ಕೂಡ ನೀಡಲಾಗುವುದು. ಪಕ್ಷದ ಕಷ್ಟದ ಪರಿಸ್ಥಿತಿಯಲ್ಲಿದೆ ಒಗ್ಗಟ್ಟಿನಿಂದ ಮೈತ್ರಿ ಸರ್ಕಾರದ ಯಶಸ್ವಿಗೆ ಸಹಕರಿಸಿ ಎಂದು ಸೂಚಿಸಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.