ಲಕ್ನೋ: ಸಮಾಜವಾದಿ ಪಕ್ಷದ (SP) ಶಾಸಕನ ಮಗಳ ಜೊತೆ ಮಗನ ಮದುವೆ ಮಾಡಿಸಿದ್ದಕ್ಕೆ ಬಿಎಸ್‌ಪಿ (BSP) ಹಿರಿಯ ನಾಯಕನನ್ನು ಪಕ್ಷದಿಂದಲೇ ಮಾಯಾವತಿ (Mayawati) ಉಚ್ಛಾಟನೆ ಮಾಡಿದ್ದಾರೆ.
ಬರೇಲಿಯ ಬಿಎಸ್‌ಪಿ ಪ್ರಭಾವಿ ನಾಯಕ ಸುರೇಂದ್ರ ಸಾಗರ್ (Surendra Sagar) ಅವರ ಪುತ್ರನ ವಿವಾಹ ಎಸ್‌ಪಿ ಶಾಸಕ ತ್ರಿಭುವನ್ ದತ್ ಅವರ ಪುತ್ರಿಯ ಜೊತೆ ನಡೆದಿತ್ತು. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav ) ಇತ್ತೀಚೆಗೆ ಅಂಬೇಡ್ಕರ್ ನಗರದಲ್ಲಿರುವ ದತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
ಬರೇಲಿ ವಿಭಾಗದ ಪ್ರಮುಖ ಬಿಎಸ್‌ಪಿ ನಾಯಕರಾದ ಸುರೇಂದ್ರ ಸಾಗರ್ ಅವರು ಐದು ಬಾರಿ ರಾಂಪುರದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಕ್ಯಾಬಿನೆಟ್ ಸಚಿವ ಸ್ಥಾನಮಾನವನ್ನು ಅಲಂಕರಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತಿನ ಕಾರಣ ನೀಡಿ ಉಚ್ಚಾಟಿಸಲಾಗಿದೆ ಎಂದು ಬಿಎಸ್‌ಪಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುರೇಂದ್ರ ಸಾಗರ್, ನಾನು ಯಾವುದೇ ಅಶಿಸ್ತು ತೋರಿಲ್ಲ. ನನ್ನ ಮಗ ಅಂಕುರ್‌ನನ್ನು ಎಸ್‌ಪಿ ಶಾಸಕ ತ್ರಿಭುವನ್ ದತ್ ಅವರ ಮಗಳ ಜೊತೆ ಮದುವೆ ಮಾಡಿ ಕೊಟ್ಟಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು 3 ನಿಮಿಷ ಮಾತ್ರ ಸ್ಥಳದಲ್ಲಿ ಕುಳಿತಿದ್ದೆ, 30 ನಿಮಿಷ ಕ್ಯಾಂಟೀನ್‌ನಲ್ಲಿ ಇದ್ದೆ: ಮನುಸಿಂಘ್ವಿ
ಮಾಯಾವತಿ ಈ ರೀತಿಯ ಕ್ರಮ ಕೈಗೊಳ್ಳುವುದು ಇದೇ ಮೊದಲಲ್ಲ. ಮೀರಾಪುರ ಉಪಚುನಾವಣೆಯಲ್ಲಿ ಎಸ್‌ಪಿಯಿಂದ ಸ್ಪರ್ಧಿಸಿದ್ದ ಖಾದಿರ್ ರಾಣಾ ಅವರ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಭಾಗೀಯ ಉಸ್ತುವಾರಿಯಾಗಿದ್ದ ಪ್ರಶಾಂತ್ ಗೌತಮ್ ಅವರನ್ನು ಹುದ್ದೆಯಿಂದ ತೆಗೆದುಹಾಕಿದ್ದರು.
ಎಸ್‌ಪಿಯೊಂದಿಗೆ ಮೈತ್ರಿ ಅಥವಾ ಒಡನಾಟ ಹೊಂದಿದ್ದರೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಮಾಯಾವತಿ ಈ ಮೊದಲೇ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದರು.