ಚಿಕ್ಕೋಡಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಪ್ರಸಿದ್ಧ ಶಕ್ತಿದೇವತೆ ಎಂದೇ ಖ್ಯಾತಿಯ ಶ್ರೀ ಮಾಯಕ್ಕದೇವಿಯ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಪ್ರಾರಂಭಗೊಂಡಿದೆ.
Advertisement
ಭರತ ಹುಣ್ಣಿಮೆಯ ಐದು ದಿನಗಳ ನಂತರ ನಡೆಯುವ ಈ ಜಾತ್ರಾ ಮಹೋತ್ಸವ ಅನಾದಿಕಾಲದ ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಭಕ್ತರು ಐತಿಹಾಸಿಕ ಪವಿತ್ರ ‘ಹಾಲಹಳ್ಳದ’ ನೀರಿನಲ್ಲಿ ಸ್ನಾನಮಾಡಿ ಅಲ್ಲಿಂದ ದೇವಸ್ಥಾನದವರಗೆ ಮಡಿ ಬಟ್ಟೆಯಲ್ಲಿಯೇ ಬಂದು ಪೂಜೆ ಸಲ್ಲಿಸುತ್ತಾರೆ. ಇನ್ನೂ ಕೆಲವು ಭಕ್ತರು ದೀರ್ಘ ನಮಸ್ಕಾರಗಳೊಂದಿಗೆ ಭಕ್ತಿ ಸೇವೆ ಸಲ್ಲಿಸುತ್ತಾರೆ.
Advertisement
Advertisement
ಭಕ್ತಿಯಿಂದ ಪರಸ್ಪರ ಭಂಡಾರ ತೂರುತ್ತ ಗರ್ಭಗುಡಿಗೆ ಬರುವ ಗುಂಪುಗಳು ದೇವಾಲಯದ ಆವರಣ ಪ್ರವೇಶಿಸುತ್ತಿದ್ದಂತೆಯೇ ನೋಡುಗರ ಗಮನ ಸೆಳೆದವು. ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ಮಹಾನೈವೇದ್ಯ ಮೊದಲಾದ ಧಾರ್ಮಿಕ ಆಚರಣೆಗಳು ಸಾಂಪ್ರದಾಯಿಕವಾಗಿ ಸಮರ್ಪಣೆಯಾದವು.
Advertisement
ಭರತ ಹುಣ್ಣಿಮೆಯಿಂದ ಶಿವರಾತ್ರಿ ಅಮಾವಾಸ್ಯೆವರಗೆ ಸುಮಾರು 15-20 ದಿನಗಳ ಕಾಲ ನಡೆಯುವ ಈ ಬೃಹತ್ ಜಾತ್ರೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ತಮಿಳನಾಡು, ಗೋವಾ ರಾಜ್ಯಗಳಿಂದಲೂ ಅಸಂಖ್ಯ ಭಕ್ತರು ಮಾಯಕ್ಕದೇವಿ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.