ಹಾಸನ: ರಾಜಕಾರಣಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸದ್ಬುದ್ಧಿಯನ್ನು ಹಾಸನಾಂಬೆ (Hassanamba) ಕೊಡಲಿ ಎಂದು ಜೆಡಿಎಸ್ (JDS) ಶಾಸಕ ಜಿ.ಟಿ ದೇವೇಗೌಡ (G.T Devegowda) ಅವರು ಹೇಳಿದ್ದಾರೆ.
ಹಾಸನಾಂಬೆ ದರ್ಶನದ ಬಳಿಕ ಅವರು ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ಸದ್ದು ಮಾಡಿದ್ದ ಸ್ಟಿಂಗ್ ಆಪರೇಷನ್ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಸ್ಟಿಂಗ್ ಅಂದರೆ ನನಗೆ ಗೊತ್ತಿಲ್ಲ. ಕಲ್ಲಲ್ಲಿ ಹೊಡೆದವರಿಗೆ ಬೆಣ್ಣೆಯಲ್ಲಿ ಹೊಡಿ ಎಂದು ಸರ್ವಜ್ಞರು ಹೇಳಿದ್ದಾರೆ. ಎರಡು ಕಡೆ ಕಲ್ಲೇಟು ಹೊಡೆಯುತ್ತಿದ್ದಾರೆ. ಬೆಂಕಿ ಎಲ್ಲಿ ಹತ್ತಿಕೊಳ್ಳುತ್ತೋ ಗೊತ್ತಿಲ್ಲ. ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕು. ಅಂತಹ ಸದ್ಬುದ್ಧಿಯನ್ನ ಆ ತಾಯಿ ಎಲ್ಲಾ ರಾಜಕಾರಣಿಗಳಿಗೂ ಕೊಡಲಿ ಎಂದಿದ್ದಾರೆ. ಇದನ್ನೂ ಓದಿ: ದೀಪಾವಳಿ ಎಫೆಕ್ಟ್, ಹಾಸನಾಂಬ ದೇವಿ ದರ್ಶನಕ್ಕಿಂದು ಭಕ್ತರ ಸಂಖ್ಯೆ ಇಳಿಕೆ – ನ.11ಕ್ಕೆ ದೇವಾಲಯದ ಗರ್ಭಗುಡಿ ಬಂದ್
ನನಗೆ ಹಿಂದೆ ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಫರ್ ಇತ್ತು. ಕಾಂಗ್ರೆಸ್ನಿಂದ ಮಂತ್ರಿ ಸ್ಥಾನದ ಅವಕಾಶವಿತ್ತು. ಆದರೂ ಪಕ್ಷ ಬಿಟ್ಟು ಮಧ್ಯಂತರದಲ್ಲಿ ಹೋಗಲಿಲ್ಲ. ಈಗ ನಾನು ಜೆಡಿಎಸ್ನಿಂದ ಗೆದ್ದಿದ್ದೀನಿ, ಜೆಡಿಎಸ್ನಲ್ಲಿ ಇದ್ದೇನೆ. ಆದರೆ ಜೆಡಿಎಸ್ ಪಕ್ಷದಿಂದ ಆಹ್ವಾನ, ಕರೆಗಳು ಮಾತುಕತೆ ಇಲ್ಲದೇ ಇರುವುದರಿಂದ ನಾನು ಪೂರ್ತಿ ಚಾಮುಂಡೇಶ್ವರಿ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೀನಿ. ನನ್ನ ಗುರಿ ಆ ಕ್ಷೇತ್ರದ ಅಭಿವೃದ್ಧಿ. ಯಾರೇ ಮುಖ್ಯಮಂತ್ರಿ ಇರಲಿ ಅವರ ಬಳಿ ಕ್ಷೇತ್ರದ ಗಮನ ಸೆಳೆದು ಅಭಿವೃದ್ಧಿ ಮಾಡುತ್ತೇನೆ.
ಹಿಂದೆ ಸಿದ್ದರಾಮಯ್ಯ ಅವರು ಏಕೆ ರಾಜೀನಾಮೆ ಕೊಡಬೇಕು ಅಂದಾಗ ನನ್ನನ್ನು ಬಿಟ್ಟರು, ಈಗ ನಮ್ಮ ನಾಯಕರು ಸಿದ್ದರಾಮಯ್ಯ ಅವರ ಮನೆಗೆ ಬರ್ತಿನಿ ಎಂದು ಹೇಳ್ತಿದ್ದಾರೆ. ಆಗ ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೆ ಸಿದ್ದರಾಮಯ್ಯ ಏಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ್ದೆ. ಇವತ್ತು ನಮ್ಮ ನಾಯಕರೇ, ಅವರು ದೊಡ್ಡ ನಾಯಕರು ಉಳಿಯಬೇಕು ಎಂದು ಹೇಳುತ್ತಿದ್ದಾರೆ. ಈಗ ನನಗೆ ಸಮಾಧಾನ ಆಗಿದೆ ಎಂದಿದ್ದಾರೆ.
ನಾನು ಬೇರೆ ಏನು ನಿರ್ಧಾರ ಮಾಡಲ್ಲ. ಚಾಮುಂಡೇಶ್ವರಿ, ಹಾಸನಾಂಬ, ಮನೆದೇವರು ಆಶೀರ್ವಾದ ಮಾಡಿ ಏನು ದಾರಿ ತೋರಿಸುತ್ತಾರೆ ಆ ದಾರಿಯಲ್ಲಿ ನಡೆದುಕೊಂಡು ಹೋಗುತ್ತೇನೆ. ನನ್ನದು ಏನು ಅಂಥ ಗೊತ್ತಿಲ್ಲ, ಆವತ್ತಿನ ದಿನಕ್ಕೆ ಆ ತಾಯಿ ಕೈಯಲ್ಲಿ ಇದೆ. ಚುನಾವಣೆಗೆ ಇನ್ನೂ ಒಂದುವರೆ ವರ್ಷ ಇದೆ, ಆ ಸಂದರ್ಭದಲ್ಲೇ ತೀರ್ಮಾನ ಮಾಡೋದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಂಹ ಸುಮ್ಮನೆ ಕೂತಿದ್ರೂ ನಾಯಿಗಳು ಬೊಗಳುವ ಇಮೇಜ್ ಹಾಕಿ ಕೌಂಟರ್; ಹೆಚ್ಡಿಕೆ ಲಂಚದ ಬಾಂಬ್ಗೆ ಹಾಸನ ಡಿಸಿ ತಿರುಗೇಟು?
