ಬೆಂಗಳೂರು: ಸಿಬಿಐ ಹೆಸರನ್ನು ಹೇಳಿಕೊಂಡು ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿ ಯುವತಿಯರನ್ನ ಕೆಟ್ಟದಾಗಿ ನಡೆಸಿಕೊಂಡಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.
ಶ್ರೀನಿವಾಸ್ ಮತ್ತು ಅವರ ತಂಡ ತಾವು ದೆಹಲಿಯ ನ್ಯಾಷನಲ್ ಇನ್ವೆಸ್ಟಿಗೇಷನ್ ಕ್ರೈಂ ಟೀಂ ಮತ್ತು ಸಿಬಿಐ ಅಧಿಕಾರಿಗಳು ಎಂದು ಸುಳ್ಳು ಹೇಳಿಕೊಂಡು ಶುಕ್ರವಾರ ಸಂಜೆ 5 ಗಂಟೆಗೆ ಮಸಾಜ್ ಪಾರ್ಲರ್ ಮನೆ ಮೇಲೆ ದಾಳಿ ಮಾಡಿದ್ದಾರೆ.
ಮಸಾಜ್ ಪಾರ್ಲರ್ ಮನೆಯಲ್ಲಿ ಇದ್ದ ಆರು ಯುವತಿಯರನ್ನ ಇವರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಇವರು ವಿಡಿಯೋ ಮಾಡೋದನ್ನ ನೋಡಿ ಯುವತಿಯರು ಮುಖ ಮುಚ್ಚಿಕೊಂಡಿದ್ದಾರೆ. ಅದಕ್ಕೆ ಸಿಟ್ಟಾದ ಇವರು ಮುಖ ತೆಗೆಯದಿದ್ದರೆ ಟಿವಿಯಲ್ಲಿ ಹಾಕಿ, ನಡುರಸ್ತೆಯಲ್ಲಿ ಮೆರವಣಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಲವಂತವಾಗಿ ಯುವತಿಯರು ಮುಖ ಮುಚ್ಚಿಕೊಂಡಿದ್ದರೂ ಕೈ ತೆಗೆದು ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ಸಾರ್ವಜನಿಕರು ನೇರವಾಗಿ ನುಗ್ಗಿ ದಾಳಿ ನಡೆಸುವಂತಿಲ್ಲ. ಸಂಬಂಧಪಟ್ಟ ಠಾಣೆಗೆ ತಿಳಿಸಿ ನಂತರ ಪೊಲೀಸರು ದಾಳಿ ನಡೆಸಬೇಕಾಗುತ್ತದೆ. ಆದರೆ ಇಲ್ಲಿ ಇವರೇ ಕಾನೂನು ಕೈಗೆ ತೆಗೆದುಕೊಂಡು ದಾಳಿ ನಡೆಸಿದ್ದಕ್ಕೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀನಿವಾಸ್ ಮತ್ತು ಗೌರಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಹಲವು ವಿಸಿಟಿಂಗ್ ಕಾರ್ಡ್: ಶ್ರೀನಿವಾಸ್ ಹಲವು ಇಲಾಖೆ ಹೆಸರಿನಲ್ಲಿ ವಿಸಿಟಿಂಗ್ ಮಾಡಿಸಿದ್ದಾನೆ. ನ್ಯಾಷನಲ್ ಇನ್ವೆಸ್ಟಿಗೇಷನ್ ಬ್ಯುರೋ, ನ್ಯಾಷನಲ್ ಮಿಡಿಯಾ ಕೌನ್ಸಿಲ್, ಸಿಟಿಜನ್ ರೈಟ್ಸ್ ಪ್ರೊಟೆಕ್ಷನ್ ಕೌನ್ಸಿಲ್ ಹೆಸರಿನ ಕಾರ್ಡ್ ಬಳಸಿ ಬೆದರಿಕೆ ಹಾಕಿದ್ದಾನೆ.