– ಭಾರತದಲ್ಲಿನ ಕಾನೂನು ಏನು ಹೇಳುತ್ತೆ?
ದೇಶಾದ್ಯಂತ ಬೀದಿ ನಾಯಿಗಳ (Stray Dogs) ಹುಚ್ಚಾಟ, ಕಡಿತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ರಸ್ತೆ ಬದಿಯಲ್ಲಿ ಓಡಾಡುವವರ ಮೇಲೆ ನಾಯಿಗಳ ದಾಳಿ ದಿನೇ ದಿನೆ ಏರಿಕೆ ಕಾಣುತ್ತಿದೆ. ಎಲ್ಲಾ ವಯೋಮಾನದವರು ಈ ಪ್ರಕರಣದಲ್ಲಿ ಸಂತ್ರಸ್ತರು. ಮಕ್ಕಳು ಮತ್ತು ವಯೋವೃದ್ಧರು ಹೆಚ್ಚು ಸಂತ್ರಸ್ತರು. ನಿರ್ಭೀತಿಯಿಂದ ಓಡಾಡುವುದಿರಲಿ, ರಸ್ತೆಗೆ ಕಾಲಿಡಲು ಹೆದರುವಂತಹ ವಾತಾವರಣ ಸೃಷ್ಟಿಯಾಗಿದೆ. ಹಳ್ಳಿಗಳಿಗಿಂತ ನಗರ ಪ್ರದೇಶಗಳಲ್ಲೇ ಬೀದಿ ನಾಯಿ ದಾಳಿಯಂತಹ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಯೇ ಇಲ್ಲ ಎಂಬಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಬೀದಿ ನಾಯಿಗಳು ಜನವಸತಿ ಇಲ್ಲದ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಆದೇಶ ಹೊರಡಿಸಿತು. ಆದರೆ, ಕೋರ್ಟ್ ತೀರ್ಪು ಈಗ ಪರ-ವಿರೋಧ ಚರ್ಚೆಗೆ ನಾಂದಿ ಹಾಡಿದೆ. ಪ್ರಗತಿಪರ ಚಿಂತಕರು, ಪ್ರಾಣಿ ಪ್ರಿಯರು, ನಟ-ನಟಿಯರು, ರಾಜಕಾರಣಿಗಳು ಕೋರ್ಟ್ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದೇಶದ ಪರವಾಗಿಯೂ ಅಭಿಪ್ರಾಯಗಳು ವ್ಯಕ್ತವಾಗಿವೆ. ಈಗ ಆದೇಶವನ್ನು ಮರುಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸಿಜೆಐ ತಿಳಿಸಿದ್ದಾರೆ.
ಅದೇನೇ ಇರಲಿ ಭಾರತದಲ್ಲಿ ಬೀದಿ ನಾಯಿಗಳ ಬಗೆಗೆ ಇರುವ ಕಾನೂನುಗಳೇನು? ವಿದೇಶಗಳಲ್ಲಿ ಯಾವ ರೀತಿಯ ಕಾನೂನುಗಳಿವೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೆಲವು ದೇಶಗಳಲ್ಲಿ ನಾಯಿಗಳಿಗೂ ಹಿಟ್ಲರ್ ಮಾದರಿಯ ಗ್ಯಾಸ್ ಚೇಂಬರ್, ಮರಣದಂಡನೆಯಂಥ ಶಿಕ್ಷೆಗಳಿರುವುದು ಕುತೂಹಲಕಾರಿ. ಎಲ್ಲೆಲ್ಲಿ ಯಾವ್ಯಾವ ಕಾನೂನುಗಳಿವೆ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬೀದಿ ನಾಯಿಗಳ ಹಾವಳಿ ಕೇಸ್ – ಹೊಸ ತ್ರಿಸದಸ್ಯ ಪೀಠ ರಚಿಸಿದ ಸಿಜೆಐ ಗವಾಯಿ
ಭಾರತದಲ್ಲಿ ಬೀದಿ ನಾಯಿಗಳ ದಾಳಿಯಲ್ಲಿ ಹೆಚ್ಚಳ?
ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಬೀದಿ ನಾಯಿಗಳ ದಾಳಿ ಸಂಖ್ಯೆ ಹೆಚ್ಚಾಗುತ್ತಿವೆ. 2023ರಲ್ಲಿ 30.5 ಲಕ್ಷದಷ್ಟಿದ್ದ ಪ್ರಕರಣಗಳು 2024ಕ್ಕೆ 37 ಲಕ್ಷಕ್ಕೆ ಏರಿಕೆ ಕಂಡಿದೆ. ಅಷ್ಟೆ ಅಲ್ಲದೇ, ನಾಯಿ ಕಡಿತದಿಂದ ಉಂಟಾಗುವ ರೇಬಿಸ್‌ನಿಂದ ಸಾವಿಗೀಡಾಗುವವ ಸಂಖ್ಯೆ ಹೆಚ್ಚಾಗಿದೆ. 2022ರಲ್ಲಿ ರೇಬಿಸ್‌ನಿಂದ ಸಾಯುವವರ ಸಂಖ್ಯೆ 21 ಇತ್ತು. 2023ಕೆ ಅದು 50ಕ್ಕೆ ಏರಿತು. 2024ಕ್ಕೂ ಇದೇ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಅತಿ ಹೆಚ್ಚು ಕೇಸ್ ಹೊಂದಿರುವ ರಾಜ್ಯಗಳ್ಯಾವುವು?
ದೇಶದ ಹಲವು ರಾಜ್ಯಗಳಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. 2024ರಲ್ಲಿ ಮಹಾರಾಷ್ಟ್ರದಲ್ಲಿ 4.85 ಲಕ್ಷ, ತಮಿಳುನಾಡಿನಲ್ಲಿ 4.80 ಲಕ್ಷ, ಗುಜರಾತ್‌ನಲ್ಲಿ 3.92 ಲಕ್ಷ, ಕರ್ನಾಟಕದಲ್ಲಿ 3.61 ಲಕ್ಷ, ಬಿಹಾರದಲ್ಲಿ 2.63 ಲಕ್ಷ, ಆಂಧ್ರಪ್ರದೇಶದಲ್ಲಿ 2.45 ಲಕ್ಷ, ಅಸ್ಸಾಂನಲ್ಲಿ 1.66 ಲಕ್ಷ, ಉತ್ತರ ಪ್ರದೇಶದಲ್ಲಿ 1.64 ಲಕ್ಷ, ರಾಜಸ್ಥಾನದಲ್ಲಿ 1.40 ಲಕ್ಷ, ಬಿಹಾರದಲ್ಲಿ ಪ್ರಕರಣಗಳು ವರದಿಯಾಗಿವೆ.
2025ರ ಅಂಕಿಅಂಶ ಗಮನಿಸುವುದಾದರೆ, ಕಳೆದ ಆರು ತಿಂಗಳಲ್ಲಿ ಕರ್ನಾಟಕದಲ್ಲಿ 2.3 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ಮತ್ತು 19 ರೇಬಿಸ್ ಸಾವುಗಳು ದಾಖಲಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ. 2024 ರಲ್ಲಿ, ರಾಜ್ಯದಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು 42 ರೇಬಿಸ್ ಸಾವುಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP) ಮಾಹಿತಿಯ ಪ್ರಕಾರ, ಈ ವರ್ಷ ಜನವರಿ 1 ರಿಂದ ಜೂನ್ 30 ರವರೆಗೆ ಕರ್ನಾಟಕದಲ್ಲಿ 2,31,091 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರ ಪೈಕಿ 19 ಮಂದಿ ರೇಬಿಸ್‌ಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,69,672 ನಾಯಿ ಕಡಿತ ಪ್ರಕರಣಗಳು ಮತ್ತು 18 ರೇಬಿಸ್ ಸಾವುಗಳು ವರದಿಯಾಗಿದ್ದವು. ಇದನ್ನೂ ಓದಿ: ಬೀದಿ ನಾಯಿಗಳನ್ನು ಆಶ್ರಯ ತಾಣಕ್ಕೆ ಸೇರಿಸೋ ತೀರ್ಪನ್ನು ಪರಿಶೀಲಿಸುತ್ತೇನೆ: ಸಿಜೆಐ
ಭಾರತದಲ್ಲಿ ಬೀದಿ ನಾಯಿಗಳಿಗೆ ಇರುವ ಕಾನೂನೇನು?
ದೇಶದಲ್ಲಿ ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಕೆಲವು ಕಾನೂನುಗಳಿವೆ. ಬೀದಿ ನಾಯಿಗಳನ್ನು ಹಿಂಸಿಸುವುದು, ಕೊಲ್ಲುವುದು ಅಥವಾ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು ಕಾನೂನು ಬಾಹಿರ. ಬದಲಿಗೆ, ಅವುಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನೀಡುವುದು, ತಪಾಸಣೆಗೆ ಒಳಪಡಿಸುವುದು ಮತ್ತು ಲಸಿಕೆ ಹಾಕಿ ಅವುಗಳ ಮೂಲಸ್ಥಾನಗಳಿಗೆ ಬಿಡುವುದು ಕ್ರಮವಾಗಿದೆ. ಬೀದಿ ನಾಯಿಗಳಿಗೆ ಆಹಾರ ನೀಡುವ ಬಗ್ಗೆಯೂ ಕೆಲವು ಮಾರ್ಗಸೂಚಿಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ತಪ್ಪಿಸಬೇಕು ಎಂದಿದೆ.
* ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟಲು ಮತ್ತು ರಕ್ಷಿಸಲು ಕಾನೂನನ್ನು ಈ ಕಾಯ್ದೆ ಒಳಗೊಂಡಿದೆ. ಬೀದಿ ನಾಯಿಗಳನ್ನು ಹಿಂಸಿಸುವುದು, ಕೊಲ್ಲುವುದು ಅಥವಾ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವುದು ಈ ಕಾಯ್ದೆಯಡಿ ಅಪರಾಧ.
* ಅನಿಮಲ್ ಬರ್ತ್ ಕಂಟ್ರೋಲ್ (ನಾಯಿಗಳು) ನಿಯಮಗಳು, 2001: ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ಸಂತಾನಹರಣ ಮತ್ತು ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಜಾರಿಗೆ ತರಲು ಈ ನಿಯಮ ರೂಪಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993: ಬೀದಿ ನಾಯಿಗಳ ಸಂತಾನ ನಿಯಂತ್ರಣ ಮತ್ತು ರೋಗಗಳ ಚಿಕಿತ್ಸೆಗೆ ಗ್ರಾಮ ಪಂಚಾಯಿತಿಗಳು ಜವಾಬ್ದಾರವಾಗಿರುತ್ತವೆ.
ಬಿಬಿಎಂಪಿ ಮಾರ್ಗಸೂಚಿಗಳು: BBMP ಬೀದಿ ನಾಯಿಗಳಿಗೆ ಆಹಾರ ನೀಡುವ ಬಗ್ಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವುದನ್ನು ತಪ್ಪಿಸಲು ಮತ್ತು ಆಹಾರ ನೀಡಿದ ನಂತರ ಸ್ವಚ್ಛಗೊಳಿಸಲು ಸೂಚಿಸಲಾಗಿದೆ.
ಬೀದಿ ನಾಯಿಗಳಿಗೆ ಇತರೆ ದೇಶಗಳಲ್ಲಿರೋ ಕಾನೂನುಗಳೇನು?
ಟರ್ಕಿ: ‘ಹತ್ಯಾಕಾಂಡ ಕಾನೂನು’
2024 ರ ಜುಲೈನಲ್ಲಿ ಟರ್ಕಿ ದೇಶ ಪುರಸಭೆಗಳು ನಗರ ಬೀದಿಗಳಿಂದ ಸುಮಾರು 40 ಲಕ್ಷ ಬೀದಿ ನಾಯಿಗಳನ್ನು ತೆರವುಗೊಳಿಸಬೇಕು ಎಂದು ಕಾನೂನನ್ನು ಜಾರಿಗೆ ತಂದಿತು. ಈ ಶಾಸನದ ಅಡಿಯಲ್ಲಿ, ಸ್ಥಳೀಯ ಅಧಿಕಾರಿಗಳು ನಾಯಿಗಳನ್ನು ಸೆರೆಹಿಡಿಯಬೇಕು, ರೋಗಗಳ ವಿರುದ್ಧ ಲಸಿಕೆ ಹಾಕಬೇಕು, ಅವುಗಳನ್ನು ಸಂತಾನಹರಣ ಮಾಡಬೇಕು ಮತ್ತು ದತ್ತು ಸ್ವೀಕಾರಕ್ಕಾಗಿ ಇಡಬೇಕು. ಅನಾರೋಗ್ಯ, ಆಕ್ರಮಣಕಾರಿ, ನೋವಿನಿಂದ ಬಳಲುತ್ತಿರುವ, ಮಾರಕ ಕಾಯಿಲೆ ಅಥವಾ ಮಾನವರಿಗೆ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ನಾಯಿಗಳಿಗೆ ದಯಾಮರಣ ಕಾನೂನನ್ನು ಅನುಮತಿಸುತ್ತದೆ. ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ; ಸುಪ್ರೀಂ ಆದೇಶಕ್ಕೆ ರಾಹುಲ್ ಗಾಂಧಿ ಆಕ್ಷೇಪ
ಮೊರಾಕೊ: ‘TNVR ಕಾರ್ಯಕ್ರಮ’
ಮೊರಾಕೊ ತನ್ನ ವಿಸ್ತೃತ ಟ್ರ್ಯಾಪ್-ನ್ಯೂಟರ್-ಲಸಿಕೆ-ರಿಟರ್ನ್ (TNVR) ಕಾರ್ಯಕ್ರಮದ ಮೂಲಕ ಬೀದಿ ನಾಯಿಗಳನ್ನು ನಿರ್ವಹಿಸಲು ಮಾನವೀಯ ವಿಧಾನವನ್ನು ಅಳವಡಿಸಿಕೊಂಡಿದೆ. ಬೀದಿ ನಾಯಿಗಳನ್ನು ಬಲೆಗೆ ಬೀಳಿಸುವುದು, ಸಂತಾನಹರಣ ಮಾಡುವುದು, ರೇಬಿಸ್ ವಿರುದ್ಧ ಲಸಿಕೆ ಹಾಕಿ ನಂತರ ಅವುಗಳನ್ನು ಮೂಲ ಸ್ಥಳಗಳಿಗೆ ಬಿಡುವುದನ್ನು ಈ ಕಾನೂನು ಪ್ರತಿಪಾದಿಸುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಜನರಿಗೆ ಅಪಾಯವನ್ನುಂಟುಮಾಡುವ ನಾಯಿಗಳನ್ನು ಮಾನವೀಯವಾಗಿ ದಯಾಮರಣಕ್ಕೆ ಗುರಿ ಪಡಿಸಲಾಗುತ್ತದೆ. ಐದು ವರ್ಷಗಳಲ್ಲಿ ಸರ್ಕಾರವು ಈ ಕಾರ್ಯಕ್ರಮಕ್ಕಾಗಿ ಸುಮಾರು 201 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿದೆ.
ಯುಕೆ: ದಯಾಮರಣ & ಕಠಿಣ ಕ್ರಮ
ಯುಕೆಯಲ್ಲಿ ಬೀದಿಗೆ ಬಿಟ್ಟ ಪ್ರಾಣಿಗಳನ್ನು ಹಿಡಿಯಲಾಗುತ್ತದೆ. ಮಾಲೀಕರ ಪತ್ತೆಗೆ ಕ್ರಮವಹಿಸಲಾಗುತ್ತದೆ. ಎಂಟು ದಿನಗಳಲ್ಲಿ ಮಾಲೀಕರು ಪತ್ತೆಯಾಗದಿದ್ದರೆ ಆಶ್ರಯಗಳಿಗೆ ವರ್ಗಾಯಿಸಲಾಗುತ್ತದೆ. ಈ ದೇಶದಲ್ಲಿ ಸಾಕುಪ್ರಾಣಿಗಳನ್ನು ತ್ಯಜಿಸುವುದು ಕಾನೂನುಬಾಹಿರವಾಗಿದೆ. ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 45,000 ಪೌಂಡ್‌ಗಳು (53 ಲಕ್ಷ ರೂ.ಗಿಂತ ಹೆಚ್ಚು) ದಂಡ ವಿಧಿಸಬಹುದು. ದತ್ತು ಪಡೆಯದ ನಾಯಿಗಳನ್ನು ಒಂದು ವಾರದೊಳಗೆ ಆಶ್ರಯಗಳಲ್ಲಿ ದಯಾಮರಣ ಮಾಡಲಾಗುತ್ತದೆ. ಕೆಲವು ಪುರಸಭೆಯ ಆಶ್ರಯಗಳು ಬೀದಿ ನಾಯಿಗಳನ್ನು ಏಳು ದಿನಗಳವರೆಗೆ ಇಟ್ಟುಕೊಳ್ಳುತ್ತವೆ. ಇದರಿಂದ ಮಾಲೀಕರು ಅವುಗಳನ್ನು ವಾಪಸ್ ಪಡೆಯಲು ಅವಕಾಶ ಇರುತ್ತದೆ. ಆದರೆ, ಅನೇಕ ಪ್ರಾಣಿ ಕಲ್ಯಾಣ ಸಂಸ್ಥೆಗಳು ಕೊಲ್ಲಬಾರದೆಂಬ ನೀತಿಗಳನ್ನು ಅನುಸರಿಸುತ್ತವೆ. ಈ ಸಂಸ್ಥೆಗಳು ನಾಯಿಗಳ ತೀವ್ರ ಅನಾರೋಗ್ಯ ಮತ್ತು ವರ್ತನೆಯಲ್ಲಿನ ಸಮಸ್ಯೆಗಳನ್ನು ಪರಿಗಣಿಸಿ ಮಾತ್ರ ದಯಾಮರಣ ನೀಡುತ್ತವೆ. ಸಾಧ್ಯವಾದಲ್ಲೆಲ್ಲಾ ಪುನರ್ವಸತಿಗೆ ಆದ್ಯತೆ ನೀಡುತ್ತವೆ.
ಜಪಾನ್: ದಯಾಮರಣ ಗ್ಯಾಸ್ ಚೇಂಬರ್
ಜಪಾನ್ ಕಟ್ಟುನಿಟ್ಟಾದ ಪ್ರಾಣಿ ಕಲ್ಯಾಣ ಕ್ರಮಗಳನ್ನು ಅನುಸರಿಸುತ್ತದೆ. ಅಲ್ಲಿ ಬೀದಿ ನಾಯಿಗಳನ್ನು ಸೆರೆಹಿಡಿದು, ಕ್ವಾರಂಟೈನ್‌ನಲ್ಲಿ ಇರಿಸಿ ಮತ್ತು ದತ್ತು ಪಡೆಯಲು ಇಡಲಾಗುತ್ತದೆ. ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪಶುವೈದ್ಯರು ಸಂತಾನಹರಣ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಆದರೆ, ಟೋಕಿಯೊ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗ್ಯಾಸ್ ಚೇಂಬರ್‌ಗಳನ್ನು ಬಳಸಿ ದಯಾಮರಣ ನಡೆಸಲಾಗುತ್ತದೆ. ಈ ವಿಧಾನವು ಅಮಾನವೀಯ ಮತ್ತು ದೀರ್ಘಕಾಲದ ನೋವನ್ನು ಉಂಟುಮಾಡುತ್ತದೆ ಎಂಬ ಟೀಕೆಗಳು ಇವೆ. ಇದನ್ನೂ ಓದಿ: ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸೇರಿಸೋದು ಅವೈಜ್ಞಾನಿಕ – ಸುಪ್ರೀಂ ತೀರ್ಪಿಗೆ PETA ಪ್ರತಿಕ್ರಿಯೆ
ಸ್ವಿಟ್ಜರ್ಲೆಂಡ್: ಪ್ರಾಣಿ ಸಂರಕ್ಷಣಾ ಕಾನೂನುಗಳು
ಸ್ವಿಟ್ಜರ್ಲೆಂಡ್ ಕಠಿಣ ಪ್ರಾಣಿ ಸಂರಕ್ಷಣಾ ಕಾನೂನುಗಳನ್ನು ಹೊಂದಿದೆ. ಸಾಕುಪ್ರಾಣಿಗಳನ್ನು ತ್ಯಜಿಸುವುದು ಕಾನೂನುಬಾಹಿರ. ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು. ನಾಯಿ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಕ್ಯಾಂಟೋನಲ್ ಅಧಿಕಾರಿಗಳ ಮೂಲಕ ನೋಂದಾಯಿಸಿಕೊಳ್ಳಬೇಕು. ಕೆಲವು ಕ್ಯಾಂಟನ್‌ಗಳಲ್ಲಿ, ನಾಯಿಯನ್ನು ಖರೀದಿಸುವ ಮೊದಲು ಪ್ರಮಾಣೀಕೃತ ಕೋರ್ಸ್ ಅನ್ನು ಪೂರ್ಣಗೊಳಿಸುವುದು ಕಡ್ಡಾಯ.
ಯುರೋಪಿಯನ್ ಒಕ್ಕೂಟ
ಯುರೋಪಿಯನ್ ಒಕ್ಕೂಟವು ಬೀದಿ ಪ್ರಾಣಿಗಳ ನಿರ್ವಹಣೆಗೆ ಏಕೀಕೃತ ಶಾಸನವನ್ನು ಹೊಂದಿಲ್ಲ. ಬದಲಾಗಿ, ಪ್ರತ್ಯೇಕ ಸದಸ್ಯ ರಾಷ್ಟ್ರಗಳು ತಮ್ಮ ಬೀದಿ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುತ್ತವೆ. ಅನೇಕ ದೇಶಗಳಲ್ಲಿ ಪುರಸಭೆಗಳು ಬೀದಿ ಪ್ರಾಣಿಗಳ ನಿಯಂತ್ರಣವನ್ನು ನಿರ್ವಹಿಸುತ್ತವೆ.