‘ನಿಮ್ಮಿಂದ ಆಗದಿದ್ರೆ, ನಮಗೆ ಬಿಡಿ’ – ಇಮ್ರಾನ್ ಖಾನ್ ಹೇಳಿಕೆಗೆ ಪಂಜಾಬ್ ಸಿಎಂ ತಿರುಗೇಟು

Public TV
1 Min Read
punjab cm

ಚಂಡೀಗಢ: ಪುಲ್ವಾಮಾ ದಾಳಿಯಲ್ಲಿ ನಮ್ಮ ಪಾತ್ರ ಯಾವುದೇ ಇಲ್ಲ. ಸಾಕ್ಷ್ಯಾಧಾರಗಳು ಇಲ್ಲದೇ ಭಾರತ ಆರೋಪ ಮಾಡುತ್ತಿದೆ ಎಂದು ಆರೋಪಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿರುಗೇಟು ನೀಡಿದ್ದಾರೆ.

ಭಯೋತ್ಪಾದಕರನ್ನು ಮಟ್ಟ ಹಾಕಲು ನಿಮ್ಮಿಂದ ಆಗದಿದ್ದರೆ ನಮಗೇ ಬಿಡಿ ನಾವು ಮಟ್ಟ ಹಾಕುತ್ತೇವೆ. ಅದರಲ್ಲೂ ಉಗ್ರ ಮಸೂದ್ ಅಜರ್ ಪಾಕಿಸ್ತಾನದ ಬಹವಾಲ್‍ಪುರದಲ್ಲಿ ಇದ್ದಾನೆ. ಆತನನ್ನು ಸೆರೆಹಿಡಿಯಲು ಆಗದಿದ್ದರೆ ಹೇಳಿ ನಾವೇ ಸೆರೆ ಹಿಡಿಯುತ್ತೇವೆ ಎಂದು ಸವಾಲು ಎಸೆದಿದ್ದಾರೆ.

ಪುಲ್ವಾಮಾ ದಾಳಿ ನಡೆಸಿರುವ ಕುರಿತು ಜೈಶ್-ಇ-ಮಹಮದ್ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಉಗ್ರ ಸಂಘಟನೆಯ ಸಂಚುಕೋರ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಅಲ್ಲಿಯೇ ಆತನನ್ನು ಬಂಧಿಸಿ. ಇಲ್ಲವಾದರೆ ನಮಗೆ ಹೇಳಿ. ಆತ ಐಸಿಸ್ ಸಹಾಯದಿಂದ ಅಲ್ಲಿಂದಲೇ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದಾನೆ. ಈ ಹಿಂದೆ ಮುಂಬೈ ದಾಳಿ ವೇಳೆ ನೀಡಿದ ಸಾಕ್ಷಿಗಳ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದು, ಈಗ ಹೇಳಿದ್ದನ್ನ ಮಾಡಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಾಕ್ಷ್ಯ ನೀಡಿದ್ರೆ ಕ್ರಮ, ಯುದ್ಧ ನಡೆದರೆ ಉತ್ತರ ಕೊಡ್ತೀವಿ: ಭಾರತವನ್ನು ಕೆಣಕಿದ ಇಮ್ರಾನ್ ಖಾನ್

ಪಂಜಾಬ್ ಸಿಎಂ ಬೆನ್ನಲ್ಲೇ ಜಮ್ಮು ಕಾಶ್ಮೀರದ ಮಾಜಿ ಸಿಎಂ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೊಹಬೂಬಾ ಮುಫ್ತಿ ಅವರು ಕೂಡ ಇಮ್ರಾನ್ ಖಾನ್ ಹೇಳಿಕೆಗೆ ಕಿಡಿಕಾರಿದ್ದಾರೆ. ದುಃಖದ ಸಮಯದಲ್ಲಿ ನಮ್ಮನ್ನು ಧರ್ಮ, ಗುರುತಿನ ಹೆಸರಿನಲ್ಲಿ ಹಿಂದು ವರ್ಸಸ್ ಮುಸ್ಲಿಂ, ಜಮ್ಮು ವರ್ಸಸ್ ಕಾಶ್ಮೀರ ಎಂದು ವಿಭಜಿಸಲು ಸಾಧ್ಯವಿಲ್ಲ. ಅಂತಿಮವಾಗಿ ಕೊಡಲಿಯನ್ನು ಮರೆಯಬಹುದೇ ವಿನಃ ಮರವನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *