– ಪ್ರೇಮಿಗಳಿಬ್ಬರನ್ನ ಒಂದು ಮಾಡಲು ಮುಂದಾದ ಗಂಡ
ಭೋಪಾಲ್: ಪತ್ನಿ ಬೇರೆ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಆಕೆಗೆ ವಿಚ್ಛೇದನ ಕೊಟ್ಟು, ಪ್ರೇಮಿಗಳಿಬ್ಬರನ್ನು ಒಂದು ಮಾಡಲು ಪತಿ ಮುಂದಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಯುವತಿಯೊಬ್ಬಳು ರೈಲ್ವೆ ಅಧಿಕಾರಿಯಾಗಿ ಕೆಲಸದಲ್ಲಿದ್ದ ಹುಡುಗನನ್ನು ಕಳೆದ ವರ್ಷ ಜುಲೈ 1 ರಂದು ಮದುವೆಯಾಗಿದ್ದಳು. ಆದರೆ ಮದುವೆಯಾದ ಮೊದಲ ರಾತ್ರಿಯೇ ತಾನೂ ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರವನ್ನು ಪತಿಗೆ ತಿಳಿಸಿದ್ದಾಳೆ. ಆಗ ಪತಿ, ಈ ವಿಚಾರವನ್ನು ಮೊದಲೇ ಏಕೆ ನನಗೆ ಹೇಳಲಿಲ್ಲ ಎಂದು ಕೇಳಿದ್ದಾನೆ. ನಮ್ಮ ಮನೆಯವರು ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಅಲ್ಲದೇ ಅವರು ಸಾಯುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾಳೆ.
ಪತ್ನಿಯ ವಿಚಾರ ತಿಳಿಯುತ್ತಿದ್ದಂತೆ ಮೊದಲಿಗೆ ಆಕೆಯ ಪ್ರಿಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದನು. ಜೊತೆಗೆ ಭೋಪಾಲ್ ಫ್ಯಾಮಿಲಿ ಕೋರ್ಟ್ ಗೆ ಹೋಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ನಂತರ ತನ್ನ ಪತ್ನಿಯ ಪ್ರಿಯಕರನನ್ನು ಭೇಟಿಯಾಗಿದ್ದಾನೆ. ಆಗ ಪ್ರಿಯಕರ, ನಾನು ಕೂಡ ಆಕೆಯನ್ನು ತುಂಬಾ ಪ್ರೀತಿಸುತ್ತೇನೆ. ಆಕೆಯನ್ನು ಮದುವೆಯಾಗಲು ಎಲ್ಲಾ ಪ್ರಯತ್ನವನ್ನು ಮಾಡಿದೆ. ಆದರೆ ಮನೆಯವರು ಒಪ್ಪಲಿಲ್ಲ ಎಂದು ಹೇಳಿದ್ದಾನೆ. ಕೊನೆಗೆ ಪತಿ ಅವರಿಬ್ಬರನ್ನು ಒಂದು ಮಾಡಲು ನಿರ್ಧರಿಸಿದ್ದನು.
ಪತ್ನಿಯ ಪ್ರಿಯಕರ ಕೂಡ ಆಕೆ ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದನು. ಈ ವೇಳೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಪತ್ನಿಯ ತಂದೆ ಹುಡುಗ ಖಾಸಗಿ ಉದ್ಯೋಗದಲ್ಲಿದ್ದಾನೆ ಎಂದು ಮದುವೆಯನ್ನು ನಿರಾಕರಿಸಿದ್ದರು. ಸರ್ಕಾರಿ ಉದ್ಯೋಗದಲ್ಲಿದ್ದರೆ ಭವಿಷ್ಯವು ಸುರಕ್ಷಿತವಾಗಿರುತ್ತದೆ ಎಂದು ನಮ್ಮ ತಂದೆ ಭಾವಿಸಿದ್ದರು ಎಂದು ಪತ್ನಿ ಹೇಳಿದ್ದಾಳೆ.
ಪ್ರೇಮಿಗಳಿಬ್ಬರು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಅಲ್ಲದೇ ಇಬ್ಬರು ಮದುವೆಯ ಬಗ್ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅರ್ಹರಾಗಿದ್ದಾರೆ ಎಂಬ ಕಾರಣಕ್ಕೆ ಈ ಪ್ರಕರಣದಲ್ಲಿ ಪೋಷಕರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಇಬ್ಬರೂ ಸ್ವ-ಇಚ್ಛೆಯಿಂದ ದೂರವಾಗಲು ನಿರ್ಧಾರ ಮಾಡಿರುವುದರಿಂದ ಪತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಶಿಫಾರಸು ಮಾಡಿದೆ.