– ಊರಿನ ಜಾತ್ರೆಗೂ ಬರ್ತಾರೆ
ಬೆಂಗಳೂರು: ಮದುವೆ ಮನೆಗೆ ಅತಿಥಿಗಳು ಬರುವುದು ಸಾಮಾನ್ಯ. ಆದರೆ ಇನ್ಮುಂದೆ ಮದುವೆ ಮನೆಗೆ ಆರೋಗ್ಯಾಧಿಕಾರಿಗಳು ಬರುತ್ತಾರೆ. ಯಾಕೆಂದರೆ ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಸಮಾರಂಭಗಳಿಗೂ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ಭೇಟಿ ಕೊಡುತ್ತಾರೆ.
ಹೌದು..ಬೇಸಿಗೆ ಕಾಲ ಹತ್ತಿರ ಬರುತ್ತಿದೆ. ರಾಜ್ಯದಲ್ಲೀಗ ಸಾಂಕ್ರಾಮಿಕ ರೋಗದ ಹಾವಳಿ. ಇದಕ್ಕಾಗಿಯೇ ಈಗ ರಾಜ್ಯ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಅದರಲ್ಲೂ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಹಾಗೂ ನೀರು ಶುದ್ಧವಾಗಿಲ್ಲದೆ ಇರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಇದಕ್ಕಾಗಿಯೇ ಈಗ ಮದುವೆ ಮಂಟಪಗಳಿಗೆ ಆರೋಗ್ಯಾಧಿಕಾರಿಗಳು ಕಡ್ಡಾಯವಾಗಿ ವಿಸಿಟ್ ಮಾಡಬೇಕು.
ಆಶಾ ಕಾರ್ಯಕರ್ತೆಯರು ಕೂಡ ಮದುವೆಯಲ್ಲಿ ಹಂಚುವ ಆಹಾರ ಹಾಗೂ ನೀರಿನ ಸ್ಯಾಂಪಲ್ ಕಲೆಕ್ಟ್ ಮಾಡಿ ಅದರ ಕ್ವಾಲಿಟಿ ಚೆಕ್ ಮಾಡಬೇಕು ಅಂತ ಆರೋಗ್ಯಾಧಿಕಾರಿಗಳು ಆದೇಶ ಕೊಟ್ಟಿದ್ದಾರೆ. ಮುಂದೆ ಊಟದಲ್ಲಿ ಸ್ವಚ್ಛತೆ ಕಾಪಾಡದೆ ಇದ್ದರೆ ಊಟ ಸಪ್ಲೈ ಮಾಡುವ ಕ್ಯಾಟರಿಂಗ್‍ನವರ ಮೇಲೆ ದೂರು ದಾಖಲಾಗುತ್ತೆ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕರಾದ ಶರೀಫ್ ಹೇಳಿದ್ದಾರೆ.
ಕೇವಲ ಮದುವೆ ಮಾತ್ರವಲ್ಲದೇ ಊರಿನ ಜಾತ್ರೆಗೂ ಕೂಡ ಆರೋಗ್ಯಾಧಿಕಾರಿಗಳು ಭೇಟಿ ಕೊಡಲಿದ್ದಾರೆ. ಊರಿನ ಜಾತ್ರೆಯಲ್ಲಿ ವಿತರಿಸುವ ಪ್ರಸಾದ, ಅಲ್ಲಿನ ಆಹಾರದ ಶಾಪ್‍ಗಳ ಸ್ವಚ್ಛತೆಯ ಮೇಲೂ ಗಮನಹರಿಸಲಿದ್ದಾರೆ. ಏನಾದರೂ ತೊಂದರೆಯಾದರೆ ಊರಿನ ಜಾತ್ರೆಯ ಮುಖಂಡತ್ವ ವಹಿಸಿರುವವರೇ ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮದುವೆ, ಜಾತ್ರೆ ಇಂತಹ ಸಮಾರಂಭದಲ್ಲಿ ಜನ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಸಾಂಕ್ರಾಮಿಕ ರೋಗ ಹೆಚ್ಚಾಗಿರುವುದರಿಂದ ಈ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಲು ನಾನಾ ಪ್ಲ್ಯಾನ್ ಮಾಡಿದೆ.