– ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕನ ಕುಟುಂಬಸ್ಥರಿಂದ ಕೃತ್ಯ
ವಿಜಯಪುರ: ಅಪ್ರಾಪ್ತ ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ತಾಯಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ.
ಕಾರಜೋಳ ಗ್ರಾಮ ಪಂಚಾಯತಿ ಸದಸ್ಯೆ ಕಸ್ತೂರಿ ಹೊಲ್ದೂರ್ ಹಲ್ಲೆಗೆ ಒಳಗಾದ ತಾಯಿ. ಗಂಭೀರವಾಗಿ ಗಾಯಗೊಂಡಿರುವ ಕಸ್ತೂರಿ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯುವಕ ಜಟ್ಟೆಪ್ಪನ ಸಂಬಂಧಿಕರು ಹಲ್ಲೆ ಮಾಡಿದ್ದು, ಈ ಪೈಕಿ ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದ ಬಬಲೇಶ್ವರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆಗಿದ್ದೇನು?:
ಕಾರಜೋಳ ಗ್ರಾಮ ಕಸ್ತೂರಿ ಹೊಲ್ದೂರ್ ಅವರ ಮಗಳಿಗೆ ಅದೇ ಗ್ರಾಮದ ಜಟ್ಟೆಪ್ಪ ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಬಾಲಕಿ ಜಟ್ಟೆಪ್ಪನನ್ನು ಮದುವೆಯಾಗಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಜಟ್ಟೆಪ್ಪ ನಿತ್ಯವೂ ಬಾಲಕಿಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಈ ಕುರಿತು ತಂದೆ-ತಾಯಿ ಬಳಿ ಸಮಸ್ಯೆ ಹೇಳಿಕೊಂಡಿದ್ದಾಳೆ.
ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಲು ಕಸ್ತೂರಿ ಹಾಗೂ ಪತಿ ಮುಂದಾಗಿದ್ದರು. ಇದರಿಂದಾಗಿ ಕೋಪಗೊಂಡ ಜಟ್ಟೆಪ್ಪನ ತಾಯಿ ಶ್ರೀದೇವಿ, ತಂದೆ ಗಂಗಪ್ಪ, ಸಂಬಂಧಿಕರಾದ ಸವಿತಾ, ಸುಮಿತ್ರ, ಪದ್ಮವ್ವ, ಸಂಗೀತಾ, ಸಿದ್ದಪ್ಪ ಹಾಗೂ ಯಲ್ಲಪ್ಪ ಕಸ್ತೂರಿ ಅವರ ಮನೆಗೆ ಬಂದಿದ್ದಾರೆ. ಈ ವೇಳೆ ಎರಡು ಕುಟುಂಬಗಳ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೊಡಲಿ ಹಿಡಿದು ಬಂದಿದ್ದ ಜಟ್ಟೆಪ್ಪನ ಸಂಬಂಧಿಯೊಬ್ಬ ಕಸ್ತೂರಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಸ್ಥಳೀಯರು ಗಲಾಟೆಯನ್ನು ತಡೆದಿದ್ದಾರೆ. ಬಲವಾಗಿ ತಲೆಗೆ ಹೊಡೆತ ಬಿದ್ದಿದ್ದರಿಂದ ಅಸ್ವಸ್ಥರಾಗಿ ಬಿದ್ದಿದ್ದ ಕಸ್ತೂರಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಕಸ್ತೂರಿ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲ್ಲೆ ನಡೆಸಿದ ಪೈಕಿ ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರು ಪರಾರಿಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv