ಚಿಕ್ಕಬಳ್ಳಾಪುರ: ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು, ಹೋಂ ಗಾರ್ಡ್ ಬೈಕ್‍ಗೆ ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಲ್ಲು ಕೋಟೆ ಬಳಿ ತಡರಾತ್ರಿ ನಡೆದಿದೆ.
ತಡರಾತ್ರಿ ತುರುವನಹಳ್ಳಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ಹೋಂಗಾರ್ಡ್ ರಮೇಶ್‍ಗೆ ಗಾಂಜಾ ಸಾಗಾಟ ಮಾಡ್ತಿದ್ದ ಮೂವರು ಯುವಕರಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೊದಲೇ ಗಾಂಜಾ ಕಿಕ್‍ನಲ್ಲಿದ್ದ ಮೂವರು ಯುವಕರಲ್ಲಿ ಓರ್ವ ಬೈಕ್ ನಲ್ಲಿ ಕುಳಿತಿದ್ರೆ, ಮತ್ತೋರ್ವ ಚಾಕು ತೋರಿಸಿ ಬೆದರಿಸಿದ್ದಾನೆ. ಮತ್ತೊರ್ವ ಕಬ್ಬಿಣದ ರಾಡಿನಿಂದ ಹೋಂ ಗಾರ್ಡ್ ರಮೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಬೂದನಗುಡ್ಡ ಬಳಿ ಮತ್ತೆ ಚಿರತೆ ಪ್ರತ್ಯಕ್ಷ
ರಮೇಶ್ ಹಾಗೂ ಆತನ ಸ್ನೇಹಿತ ಶೇಖರ್ ಅಲ್ಲಿಂದ ಭಯದಿಂದ ಒಡಿ ಹೋಗಿ ದೂರ ನಿಂತಿದ್ದಾರೆ. ಈ ವೇಳೆ ಬೈಕ್‍ನ ಪೆಟ್ರೋಲ್ ಪೈಪ್ ಕಟ್ ಮಾಡಿದ ಕಿಡಿಗೇಡಿಗಳು, ಬೈಕ್‍ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿ ನಂದಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ತದನಂತರ ಮತ್ತೆ ವಾಪಸ್ ಬಂದ ಕಿಡಿಗೇಡಿಗಳು ಬೈಕ್ ಸುಟ್ಟು ಹೋಗಿದೆಯಾ ಇಲ್ಲವೇ ಅಂತ ನೋಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ
ಅಷ್ಟರಲ್ಲಿ ಗ್ರಾಮಸ್ಥರಿಗೆ ಕರೆ ಮಾಡಿ ಮತ್ತೊಂದು ಬೈಕ್ ತರಿಸಿಕೊಂಡಿದ್ದ ರಮೇಶ್, ಬೈಕ್ ಮೂಲಕ ಕಿಡಿಗೇಡಿಗಳನ್ನು ಚೇಸ್ ಮಾಡಿ ಅಡ್ಡ ಹಾಕಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿಗಳು ಸಿಕ್ಕಿ ಹಾಕಿಕೊಳ್ಳದೆ ಪರಾರಿಯಾಗಿದ್ದಾರೆ.
ಕಿಡಿಗೇಡಿಗಳದ್ದು ಹೊಂಡಾ ಶೈನ್ ಬೈಕ್ ಅಂತ ತಿಳಿದುಬಂದಿದ್ದು, ಹೆಸರಘಟ್ಟ ಮೂಲದವರು ಎನ್ನಲಾಗಿದೆ. ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಮೇಶ್ ದೂರು ದಾಖಲಿಸಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.