ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿದ್ದ ದೇವಸ್ಥಾನದ ಟ್ರಸ್ಟಿ ಚಿನ್ನಪ್ಪಿ ಐದು ದಿನದ ಬಳಿಕ ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ಕುಟುಂಬಸ್ಥರ ಜೊತೆ ಸೇರಿ ಕಣ್ಣೀರಿಟ್ಟು ಇನ್ನೂ ಮುಂದೆ ನಾನು ದೇವಸ್ಥಾನದ ವಿಚಾರಕ್ಕೆ ಹೋಗುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಪ್ರಸಾದದಲ್ಲಿ ವಿಷ ಬೆರೆಸಿದ ಆರೋಪದಡಿ ಚಿನ್ನಪ್ಪಿಯನ್ನು ಪೊಲೀಸರು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸಿದ್ದರು. ಈಗ ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮಿ ಮಹದೇವಸ್ವಾಮಿ, ಮಾರಮ್ಮ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್, ಆತನ ಪತ್ನಿ ಅಂಬಿಕಾ ಹಾಗೂ ನಾಗರಕಲ್ಲಿನ ಅರ್ಚಕನಾಗಿದ್ದ ದೊಡ್ಡಯ್ಯ ತಪ್ಪು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇಂದು ಚಿನ್ನಪ್ಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
Advertisement
Advertisement
ಕುಟುಂಬದ ಸದಸ್ಯರನ್ನು ಸೇರುತ್ತಿದ್ದಂತೆ ಚಿನ್ನಪ್ಪಿ ಕಣ್ಣೀರು ಸುರಿಸಲು ಆರಂಭಿಸಿದರು. ದೇವಸ್ಥಾನದ ವಿಚಾರಕ್ಕೆ ನಾನು ಹಾಗೂ ನೀವು ಯಾರೊಬ್ಬರೂ ತಲೆ ಹಾಕುವಂತಿಲ್ಲ ಎಂದು ಚಿನ್ನಪ್ಪಿ ಮನೆಯ ಸದಸ್ಯರಿಗೆ ಸೂಚಿಸಿದ್ದಾರೆ. ಈ ಮೂಲಕ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ಧರ್ಮಾಧಿಕಾರಿ ಸ್ಥಾನದಿಂದ ಚಿನ್ನಪ್ಪಿ ಹಿಂದೆ ಸರಿಯಲಿದ್ದಾರೆ.
Advertisement
ಅಕ್ರಮ ಸಂಬಂಧ ಹೊಂದಿದ್ದ ಇಮ್ಮಡಿ ಮಹದೇಸ್ವಾಮಿ ಮತ್ತು ಅಂಬಿಕಾ ಇಬ್ಬರು ಸೇರಿಯೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಈ ಇಬ್ಬರು ಆರೋಪಿಗಳು ಕೊಳ್ಳೇಗಾಲ ತಾಲೂಕಿನ ಶಾಗ್ಯ ಗ್ರಾಮದವರಾಗಿದ್ದು, ಸಾಲೂರು ಮಠ ಹಾಗೂ ಮಾರಮ್ಮ ದೇವಸ್ಥಾನದ ಟ್ರಸ್ಟ್ ಹಾಗೂ ಸಾಲೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ.
Advertisement
ದೇವಸ್ಥಾನ ಟ್ರಸ್ಟಿ ಚಿನ್ನಪ್ಪಿ ಹಾಗೂ ದೇವಸ್ಥಾನದ ಗೋಪುರ ನಿರ್ಮಾಣದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಹೆಸರು ಹಾಳು ಮಾಡುವ ಉದ್ದೇಶದಿಂದ ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಕೃತ್ಯದಿಂದ ಟ್ರಸ್ಟಿಗಳು ಜೈಲು ಶಿಕ್ಷೆ ಗುರಿಯಾಗಲಿದ್ದು, ದೇವಸ್ಥಾನದ ಆಡಳಿತ ನಮ್ಮ ಕೈಸೇರುತ್ತದೆ ಎನ್ನುವುದು ಮಹದೇವಸ್ವಾಮಿ ಹಾಗೂ ಅಂಬಿಕಾ ಪ್ಲಾನ್ ಆಗಿತ್ತು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಸಾಲೂರು ಮಠದ ಹಿರಿಯ ಸ್ವಾಮೀಜಿ ಕೂಡ ಜೈಲು ಸೇರುತ್ತಾರೆ. ಹೀಗಾಗಿ ಮಠ ಹಾಗೂ ದೇವಸ್ಥಾನದ ಆಡಳಿತ ನಮ್ಮ ಕೈಗೆ ಸೇರುತ್ತದೆ ಎನ್ನುವ ದುರಾಲೋಚನೆಯಿಂದ ಈ ಕೃತ್ಯ ಎಸಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv