ಶ್ರೀನಗರ: ಕಳೆದ ಗುರುವಾರ ಶೋಪಿಯಾನ್‍ನಲ್ಲಿ ಯೋಧರ ಗುಂಡಿನ ದಾಳಿಗೆ ಹತನಾದ ಉಗ್ರನ ಜೇಬಿನಲ್ಲಿ ಸಿಕ್ಕ ಮ್ಯಾಪ್ ಒಂದು ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ನಡೆಯಬೇಕಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.
ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನವನ್ನೇ ಗುರಿಯಾಗಿಸಿಕೊಂಡು ಭಯೋತ್ಪಾದಕರು ಹಲವಾರು ದಾಳಿಯನ್ನು ಕಾಶ್ಮೀರದಲ್ಲಿ ಮಾಡಲಿದ್ದಾರೆ ಎಂದು ಭಾರತೀಯ ಗುಪ್ತಚರ ಇಲಾಖೆ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿತ್ತು.
ಈ ಮಾಹಿತಿಗೆ ಪೂರಕ ಎಂಬಂತೆ ಗುರುವಾರ ಸೇನೆಯ ಗುಂಡಿನ ದಾಳಿಗೆ ಬಲಿಯದ ಉಗ್ರನ ಜೇಬಿನಲ್ಲಿ ನಕ್ಷೆ ದೊರಕಿದೆ. ಈ ಮ್ಯಾಪ್‍ನ ಪ್ರಕಾರ ಶ್ರೀನಗರ ಮತ್ತು ಅವಂತಿಪೋರದಲ್ಲಿರುವ ಭಾರತೀಯ ವಾಯುಪಡೆಯ ನಲೆಗಳ ಮೇಲೆ ಮೇ 23 ರಂದು ದಾಳಿ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.
ಮೇ 14 ರಂದು ನಡೆದ ಸಭೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ರಿಯಾಜ್ ನೈಕೂ, ಜೈಶ್-ಇ- ಮೊಹಮ್ಮದ್ ಉಗ್ರಸಂಘಟನೆಯ ಇಬ್ಬರು ಉಗ್ರರು ಮತ್ತು ಲಷ್ಕರ್-ಇ-ತೊಯ್ಬಾ ಸಂಘಟನೆಯ ರಿಯಾಜ್ ದಾರ್ ಎಂಬ ನಾಲ್ಕು ಉಗ್ರರು ಸೇರಿಕೊಂಡು ವಾಯು ನೆಲೆಗಳ ಮೇಲೆ ದಾಳಿ ಮಾಡಲು ಸಂಚು ಮಾಡಿದ್ದರು ಎಂದು ತಿಳಿದುಬಂದಿದೆ.
ಪುಲ್ವಾಮ ಮತ್ತು ಶೋಪಿಯಾನ್‍ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 6 ಮಂದಿ ಉಗ್ರರನ್ನು ಕೊಲ್ಲಲಾಗಿತ್ತು. ಆ ಸಮಯದಲ್ಲಿ ಈ ಮಾಹಿತಿಯು ಹೊರಬಂದಿದೆ. ಈ ಗುಂಡಿನ ಕಾಳಗದಲ್ಲಿ 2 ಜನ ಭಾರತೀಯ ಯೋಧರು ವೀರಮರಣ ಅಪ್ಪಿದ್ದರು.