ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯ ಸೋತ ಬಳಿಕ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಕೋಚ್ ಗೌತಮ್ ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಗಂಭೀರ್‌ಗೆ ಕ್ರಿಕೆಟ್ ಬಗ್ಗೆ ಯಾವುದೇ ಜ್ಞಾನವಿಲ್ಲ. ಭಾರತದ ಕೋಚ್‌ಗೆ ಪಿಚ್ ಬಗ್ಗೆ ಏನೂ ತಿಳಿದಿಲ್ಲ. ಪಿಚ್‌ನ್ನು ಅರ್ಥಮಾಡಿಕೊಳ್ಳುವಲ್ಲಿ ಕೋಚ್ ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಮಾಡಿದ್ದು, ಪರ್ತ್‌ನಲ್ಲಿ ರವಿಚಂದ್ರನ್ ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಿದ್ದು ಬಾಲಿಶ ನಿರ್ಧಾರಗಳಾಗಿವೆ. ಇದು ಕೋಚ್ (ಗಂಭೀರ್) ಗೆ ಕ್ರಿಕೆಟ್ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಎತ್ತಿ ತೋರಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ಐಪಿಎಲ್ ಗೆದ್ದ ನಂತರ, ಪಿಆರ್ ಏಜೆನ್ಸಿ ಗೌತಮ್‌ಗಿಂತ ಉತ್ತಮ ಕೋಚ್ ಇಲ್ಲ ಎಂಬ ವಾತಾವರಣವನ್ನು ಸೃಷ್ಟಿಸಿತು. ಆದರೆ ಎಲ್ಲಾ ಕ್ರೆಡಿಟ್‌ಗಳು ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್‌ಗೆ ಸಲ್ಲಬೇಕಿತ್ತು. ಹಿರಿಯ ಆಟಗಾರನನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ಅಶ್ವಿನ್ ನಿವೃತ್ತಿಗೆ ಕೋಚ್ ಕೂಡ ಕಾರಣ ಎಂದು ಅವರು ಹೇಳಿದ್ದಾರೆ.
ಗಂಭೀರ್ ಜುಲೈ 2024 ರಿಂದ ಮುಖ್ಯ ಕೋಚ್ ಹುದ್ದೆ ವಹಿಸಿಕೊಂಡರು. ಇದಾದ ನಂತರ, ಟೀಂ ಇಂಡಿಯಾ ಮೊದಲು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಸೋತಿತ್ತು. ಇದರ ನಂತರ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು 1-3 ಅಂತರದಲ್ಲಿ ಸೋತಿತ್ತು.